ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಹಾಡಹಗಲೇ ಮಹಿಳೆ ಮೇಲೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ತಕ್ಷಣವೇ ಆಕೆಯನ್ನ ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ವಕೀಲನ ವೇಷದಲ್ಲಿ ಬಂದ ವ್ಯಕ್ತಿ ದೆಹಲಿಯ ನ್ಯಾಯಾಲಯದೊಳಗೇ ಮಹಿಳೆ ಮೇಲೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗಾಗಿ ಮಹಿಳೆ ನ್ಯಾಯಾಲಯದಲ್ಲಿದ್ದಾಗ ಆಕೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಅಪರಾಧಿ ಎಸ್ಕೆಪ್ ಆಗಿದ್ದರೂ ತಕ್ಷಣವೇ ಕಾರ್ಯಪ್ರರ್ವತರಾದ ಪೊಲೀಸರು ಅಪರಾಧಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನ್ಯಾಯಾಲಯದ ಆವರಣದಲ್ಲಿ ಹಿಂಸಾಚಾರದ ಘಟನೆಗಳು ಒಂದೇ ಸಮನೆ ಹೆಚ್ಚಾಗುತ್ತ ಹೋಗುತ್ತಿದೆ. ನ್ಯಾಯಾಲಯದ ಆವರಣದಲ್ಲೇ ಅಪರಾಧಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 24ರಂದು ರೋಹಿಣಿಯ ನ್ಯಾಯಾಲಯದ ಕೊಠಡಿಯೊಳಗೆ ದರೋಡೆಕೋರ ಜಿತೇಂದರ್ ಮಾನ್ ಅಲಿಯಾಸ್ ಗೋಗಿ ಮೇಲೆ ಇಬ್ಬರು ಬಂದೂಕುಧಾರಿಗಳು ವಕೀಲರಂತೆ ಅನೇಕ ಗುಂಡುಗಳನ್ನು ಹಾರಿಸಿದರು. ಪೊಲೀಸ್ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈಗ ಮತ್ತೆ ಘಟನೆ ನಡೆದಿದ್ದು ಅಪರಾಧಿಗಳು ಕಾನೂನಿಗೂ ಹೆದರದೇ ರಕ್ತದಾಟ ಆಡುತ್ತಿರುವುದಕ್ಕೆ ಸಾಕ್ಷಿಯಾದಂತಿದೆ.