ಅತ್ಯಾಚಾರ ಸಂತ್ರಸ್ತರು ಆಪಾದಿತರನ್ನು ಮದುವೆಯಾದಲ್ಲಿ, ಅತ್ಯಾಚಾರ ಸಂಬಂಧದ ನ್ಯಾಯಾಂಗ ತನಿಖೆಯ ಕಾರಣದಿಂದ ಅವರ ವೈವಾಹಿಕ ಜೀವನದ ಮೇಲೆ ದುಷ್ಪರಿಣಾಮ ಬೀರಲು ಬಿಡಲಾಗದು ಎಂದು ಪಂಜಾಬ್ ಮತ್ತು ಹರಿಯಾಣಾ ಹೈಕೋರ್ಟ್ ಆದೇಶಿಸಿದೆ.
ಅತ್ಯಾಚಾರ ಸಂತ್ರಸ್ತೆಯೊಂದಿಗೆ ತಾನು ರಾಜಿ ಮಾಡಿಕೊಂಡಿದ್ದು, ಆಕೆಯನ್ನು ಮದುವೆಯಾಗಿರುವ ಕಾರಣ ತನ್ನ ವಿರುದ್ಧ ಸಲ್ಲಿಸಿದ್ದ ಎಫ್‌ಐಆರ್ ವಜಾಗೊಳಿಸಲು ಆಪಾದಿತ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ.
“ಆಪಾದಿತ ಹಾಗೂ ಸಂತ್ರಸ್ತೆ ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ಇಬ್ಬರೂ ಮದುವೆಯಾಗಿದ್ದಾರೆ. ಕ್ರಿಮಿನಲ್ ತನಿಖೆ ನಡೆಸುವುದರಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ,” ಎಂದು ನ್ಯಾಯಾಧೀಶ ಅಮರ್ಜೋತ್ ಭತ್ತಿ ತಮ್ಮ ಇತ್ತೀಚಿನ ಆದೇಶದಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 2020ರಂದು ಚಂದನ್ ಪಾಸ್ವಾನ್ ಹೆಸರಿನ ವ್ಯಕ್ತಿಯ ಮೇಲೆ ಅತ್ಯಾಚಾರದ ಆಪಾದನೆ ಮೇಲೆ ನ್ಯಾಯಾಂಗ ತನಿಖೆ ಆರಂಭಿಸಲಾಗಿತ್ತು. ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಅಹಮದ್‌ಘಡದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿರುವ ವಿಚ್ಛೇದಿತ ಮಹಿಳೆಯೊಬ್ಬರ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದ ಚಂದನ್, ಈ ವೇಳೆ ಆಕೆಯ ಮೇಲೆ ಅತ್ಯಾಚಾರಗೈದಿದ್ದ ಎಂದು ಆಪಾದಿಸಲಾಗಿತ್ತು.
ಇದೀಗ ಇಬ್ಬರ ಮದುವೆಯಿಂದಾಗಿ ಪ್ರಕರಣ ಸುಖಾಂತ್ಯ ಕಂಡಿದೆ.