ದಾವಣಗೆರೆ: ರಾಜಕೀಯದಲ್ಲಿ ಓಡುವ ಕುದುರೆ ಎಂದೇ ಖ್ಯಾತರಾಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸು 91 ಆಗಿದ್ದರೂ ರಾಜಕಾರಣದಿಂದ ಹಿಂದೆ ಸರಿದಿಲ್ಲ. ಅವರು ಮತ್ತೊಮ್ಮೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹಿರಿಯ ಕಾಂಗ್ರೆಸ್ ಸದಸ್ಯರಾಗಿರುವ ಶಾಮನೂರು ಶಿವಶಂಕರಪ್ಪ ಐದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಲೋಕಸಭೆ ಸದಸ್ಯರೂ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಜ್ಜಾಗಿದ್ದಾರೆ. ಮತ್ತೊಮ್ಮೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ನನಗೆ ಜನರ ಬೆಂಬಲ ಮತ್ತು ದೇವರ ಆಶೀರ್ವಾದವಿದೆ. ಇನ್ನೇನು ಬೇಕು ?’ ಎಂದು ಪ್ರಶ್ನಿಸಿದ್ದಾರೆ.
ಈ ಇಳಿ ವಯಸ್ಸಿನಲ್ಲೂ ಕಾಂಗ್ರೆಸ್ ಹೇಗೆ ಟಿಕೆಟ್ ನೀಡಿತು ಎಂಬ ಬಗ್ಗೆ ಮಾತನಾಡಿದ ಅವರು, ಓಟದ ಕುದುರೆಗಳನ್ನು ಮಾತ್ರ ರೇಸ್‌ಗೆ ಆಯ್ಕೆ ಮಾಡಲಾಗುತ್ತದೆ. ನಾನು ಕೂಡ ಅಂತಹ ಕುದುರೆ. ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಇವರ ಪ್ರಮುಖ ಎದುರಾಳಿಯಾಗಿ ದಾವಣಗೆರೆಯ ಮಾಜಿ ಮೇಯರ್ ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಕಣಕ್ಕಿಳಿದಿದ್ದಾರೆ.
ಎಸ್ಎಸ್ ಎಂದು ಜನರು ಇವರನ್ನು ಪ್ರೀತಿಯಿಂದ ಕರೆಯುತ್ತಾರೆ. ನಡೆಯುವಾಗ ಇವರಿಗೆ ಯಾರದ್ದಾದರೂ ಬೆಂಬಲ ಬೇಕಾಗುತ್ತದೆ. ಆದರೆ, ಉತ್ತಮ ಕೇಳುವ ಸಾಮರ್ಥ್ಯ, ಸ್ಪಷ್ಟ ಧ್ವನಿ ಮತ್ತು ಸ್ಪಷ್ಟತೆಯೊಂದಿಗೆ ಅವರು ಮಾತನಾಡುತ್ತಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು 312.75 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ.
ತಮ್ಮ ಬದಲಿಗೆ ಅಲ್ಪಸಂಖ್ಯಾತ ಸಮುದಾಯದ ಯಾರೋ ಒಬ್ಬರು ಟಿಕೆಟ್ ಪಡೆಯುತ್ತಾರೆ ಎಂಬ ಬಗ್ಗೆ ಕೇಳಿಬಂದಿತ್ತು ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಎಸ್ಎಸ್, ದಾವಣಗೆರೆ ದಕ್ಷಿಣದಿಂದ ಎಲ್ಲರೂ ನನ್ನ ಜೊತೆಗೆ ಇದ್ದಾರೆ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಮುಸ್ಲಿಮರು ಮತ್ತು ಲಿಂಗಾಯತರು ನನ್ನೊಂದಿಗಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಶಿವಶಂಕರಪ್ಪ ಅವರು ಚುನಾವಣಾ ಕಣದಲ್ಲಿ ತನಗೆ ಪ್ರತಿಸ್ಪರ್ಧಿ ಇಲ್ಲ, ಚುನಾವಣೆಯಲ್ಲಿ ನಾನು ಗೆಲ್ಲುವುದು ಖಚಿತ ಎಂದಿದ್ದಾರೆ.
ಅಂದಹಾಗೆ, ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಶಿವಶಂಕರಪ್ಪ ಅವರ ಪುತ್ರ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.