
ಬುಡಕಟ್ಟು ಜನಾಂಗದ ಪ್ರಾಬಲ್ಯದ ಮಧ್ಯ ಪ್ರದೇಶದ ದಿಂಡೋರಿ ಜಿಲ್ಲೆಯು ಯುವಕನೊಬ್ಬ ವಿಶ್ವ ಜೂನಿಯರ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಜಯಿಸಿದ ಭಾರತದ ತಂಡದಲ್ಲಿ ಪ್ರತನಿಧಿಸಿದ್ದಾನೆ ಎಂಬ ಸುದ್ದಿಯನ್ನು ಏಪ್ರಿಲ್ 11ರ ಬೆಳ್ಳಂಬೆಳಿಗ್ಗೆ ನೋಡಿದೆ.
ಇರಾನ್ ವಿರುದ್ಧ ಭಾರತ ಫೈನಲ್ ಪಂದ್ಯದಲ್ಲಿ ಜಯಿಸಿದ ಸುದ್ದಿ ದೇಶದಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ದಿಂಡೋರಿ ಜಿಲ್ಲೆಯ ಸಚಿನ್ ಕುಶ್ರಾಮ್ ಹೆಸರಿನ ಯುವಕನೊಬ್ಬ ಇದೇ ಭರದಲ್ಲಿ, ತಾನು ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದೆ ಎಂದುಹೇಳಿಕೊಂಡು, ಭಾರೀ ಸುದ್ದಿಯಾಗಿಬಿಟ್ಟಿದ್ದಾನೆ.
ಸಂಪುಟ ಸಚಿವರೂ ಆಗಿದ್ದ ದಿಂಡೋರಿ ಶಾಸಕ ಓಮಕಾರ್ ಮಾರ್ಕಂ ಸಚಿನ್ನನ್ನು ಶ್ಲಾಘಿಸಿದ್ದಾರೆ. ಕಲೆಕ್ಟರ್ ವಿಕಾಸ್ ವಿಶ್ರಾ ಆತನನ್ನು ’ಮೇಧಾವಿ’ ಎಂದು ವರ್ಣಿಸಿದ್ದಾರೆ. ಕೊರಳಿನಲ್ಲಿ ಪದಕ ಹಾಗೂ ಕೈಯಲ್ಲಿ ಟ್ರೊಫಿ ಹಿಡಿದ ಸಚಿನ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಬೇಗ ವೈರಲ್ ಆಗಿಬಿಟ್ಟಿದೆ.
ಆದರೆ ಈ ಫೋಟೋವನ್ನು ಮಾರ್ಫ್ ಮಾಡಲಾಗಿದೆ ಎಂದು ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ. ಅಸಲಿಗೆ ಸಚಿನ್ ವಿಶ್ವಕಪ್ ಜಯಿಸಿದ ಭಾರತ ತಂಡದ ಭಾಗವಾಗಿರಲಿಲ್ಲ.
ತಾನು ಇತಿಹಾಸ ಸೃಷ್ಟಿಸಿರುವುದಾಗಿ ತನ್ನ ತಂದೆ, ಶಿಕ್ಷಕರು, ಹಾಗೂ ಹಿತೈಷಿಗಳ ಬಳಿ ಹೇಳಿಕೊಂಡ ಸಚಿನ್, ಏಪ್ರಿಲ್ 12ರಂದು ತನ್ನೂರಿಗೆ ಆಗಮಿಸಿದ್ದಾನೆ. ಇದೇ ವೇಳೆ, ದಿಂಡೋರಿ ಶಾಸಕರು ಸಚಿನ್ನನ್ನು ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಆತನ ಗ್ರಾಮ ರೂಸಾಗೆ ಕರೆದೊಯ್ದಿದ್ದಾರೆ.
ಇದೇ ದಿಂಡೋರಿ ಜಿಲ್ಲೆಯ ಕ್ರಿಕೆಟರ್ ಹಾಗೂ ವಕೀಲ ಅಭಿನವ್ ಕಟಾರೆಗೆ ಏನೋ ಮಿಸ್ ಹೊಡೆಯುತ್ತಿರುವುದು ಅರಿವಿಗೆ ಬಂದಿದೆ. ಟೂರ್ನಮೆಂಟ್ನ ವಿಡಿಯೋ ತುಣುಕುಗಳನ್ನು ಜಾಲಾಡಿದ ಕಟಾರೆಗೆ, ಫೆಬ್ರವರಿ 26ರಿಂದ ಮಾರ್ಚ್ 5ರವರೆಗೆ ಆಯೋಜಿಸಿದ್ದ ಟೂರ್ನಿಯಲ್ಲಿ ಭಾರತದ ಪರ ಸಚಿನ್ ಆಡಿಯೇ ಇಲ್ಲ ಎಂದು ತಿಳಿದುಬಂದಿದೆ.
ಜನರನ್ನು ಹಾದಿ ತಪ್ಪಿಸಲು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸಚಿನ್ ವಿರುದ್ದ ವಕೀಲ ಅಭಿನವ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.