ಪ್ರಯಾಗ್‌ರಾಜ್‌ನಲ್ಲಿ ದಾರುಣವಾಗಿ ಕೊಲೆಯಾಗುವ ಎರಡು ವಾರಗಳ ಮುನ್ನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹಾಗು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಅತೀಕ್ ಪತ್ರ ಬರೆದಿದ್ದರು ಎನ್ನಲಾಗಿದ್ದು, ಅವನ್ನೀಗ ಇಬ್ಬರಿಗೂ ತಲುಪಿಸಲಾಗಿದೆ.
“ಈ ಪತ್ರವು ಮುಚ್ಚಿದ ಲಕೋಟೆಯಲ್ಲಿದ್ದು, ಅದೀಗ ನನ್ನ ಬಳಿ ಇಲ್ಲ. ಪತ್ರವು ಬೇರೆಲ್ಲೋ ಇದ್ದು, ಅದನ್ನು ಬೇರೊಬ್ಬರು ಕಳುಹಿಸುತ್ತಿದ್ದಾರೆ. ಪತ್ರದಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ,” ಎಂದು ಅತೀಕ್ ಅಹಮದ್ ಪರ ವಕೀಲ ವಿಜಯ್ ಮಿಶ್ರಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ತಮ್ಮ ಪ್ರಾಣಕ್ಕೇನಾದರೂ ಕುತ್ತು ಬಂದಲ್ಲಿ ಆ ಪತ್ರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಕಳುಹಿಸಲು ಅತೀಕ್ ಬಯಸಿದ್ದರು ಎಂದು ಮಿಶ್ರಾ ತಿಳಿಸಿದ್ದಾರೆ.
ಮಾಧ್ಯಮ ಸುದ್ಧಿಗೋಷ್ಠಿ ನಡುವೆ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ಅತೀಕ್ ಹಾಗೂ ಆತನ ಸಹೋದರ ಅಶ್ರಫ್‌ನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಟ್ಟು ಕೊಲೆ ಮಾಡಿದ್ದಾರೆ.
ಜೈಲಿನಲ್ಲಿದ್ದ ಈ ಸಹೋದರರನ್ನು ವೈದ್ಯಕೀಯ ತಪಾಸಣೆಗೆಂದು ಪ್ರಯಾಗ್‌ರಾಜ್‌ನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುತ್ತಿದ್ದ ವೇಳೆ ಹೀಗೆ ಗುಂಡಿಟ್ಟು ಹೊಡೆದು ಹಾಕಲಾಗಿದೆ. ಘಟನೆಯು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಏಪ್ರಿಲ್ 13ರಂದು ಪೊಲೀಸ್ ಎನ್ಕೌಂಟರ್‌ನಲ್ಲಿ ಅತೀಕ್‌ನ ಪುತ್ರನನ್ನು ಕೊಲ್ಲಲಾಗಿತ್ತು. ಆತನ ಅಂತಿಮ ಸಂಸ್ಕಾರ ಮುಗಿಸಿದ ಬೆನ್ನಿಗೇ ಅತೀಕ್ ಹಾಗೂ ಅಶ್ರಫ್‌ರನ್ನು ಕೊಲೆಗೈಯ್ಯಲಾಗಿದೆ.
ಉಮೇಶ್ ಪಾಲ್ ಹಾಗು ಆತನ ಭದ್ರತಾ ಸಿಬ್ಬಂದಿಯನ್ನು ಕೊಂದ ಆರೋಪದ ವಿಚಾರಣೆಗೆಂದು ಅತೀಕ್‌ನನ್ನು ಗುಜರಾತ್ ಜೈಲಿನಿಂದ ಹಾಗೂ ಅಶ್ರಫ್‌ನನ್ನು ತಿಹಾರ್ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತರಲಾಗಿತ್ತು.
ಇದಕ್ಕೂ ಮುನ್ನ, ಸಬರಮತಿ ಜೈಲಿನಿಂದ ಹೊರ ಬರುವ ಮುನ್ನ ಮಾಧ್ಯಮಗಳೊಂದಿಗೆ ಜೋರಾದ ದನಿಯಲ್ಲಿ ಬಡಿದುಕೊಂಡಿದ್ದ ಅತೀಕ್, “ಹತ್ಯಾ ಹತ್ಯಾ…….” ಎಂದು ಕಿರುಚಾಡಿದ್ದು, ಉತ್ತರ ಪ್ರದೇಶಕ್ಕೆ ಕಾಲಿಟ್ಟರೆ ತನ್ನನ್ನು ಕೊಂದುಬಿಡುತ್ತಾರೆ ಎಂಬ ಭೀತಿ ವ್ಯಕ್ತಪಡಿಸಿದ್ದ.
ಇದೇ ವೇಳೆ, ಅತೀಕ್ ಹಾಗೂ ಅಶ್ರಫ್ ಕೊಲೆಯ ತನಿಖೆ ನಡೆಸಲು ಎರಡು ವಿಶೇಷ ತನಿಖಾ ತಂಡಗಳನ್ನು ಉತ್ತರ ಪ್ರದೇಶ ಸರ್ಕಾರ ರಚಿಸಿದೆ. ಜೊತೆಯಲ್ಲಿ ಮೂರು ಮಂದಿಯ ಮೇಲುಸ್ತುವಾರಿ ತಂಡವನ್ನು ಸಹ ರಚಿಸಲಾಗಿದೆ.