ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಬಳಿಕ ಗಡಿಯಾಚೆಗೆ ಹೋಗಲು ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದರು. ಅವರಲ್ಲಿ ಪಂಜಾಬ್ ಮೂಲದ 98 ವರ್ಷದ ಬಾಬಾ ಪುರಾನ್ ಸಿಂಗ್ ಕೂಡ ಸೇರಿದ್ದು ಇತ್ತೀಚೆಗೆ ಅವರು 77 ವರ್ಷಗಳ ನಂತರ ಪಾಕಿಸ್ತಾನದ ತನ್ನ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಿದರು. ಇದು ಅವರಿಗೆ ಹಾಗೂ ಗಡಿಯಾಚೆಗಿನ ಗ್ರಾಮಸ್ಥರಿಗೆ ಭಾವನಾತ್ಮಕ ಕ್ಷಣವಾಗಿತ್ತು.
ಪಾಕಿಸ್ತಾನದ ಗುಜ್ರಾನ್‌ವಾಲಾ ಜಿಲ್ಲೆಯ ಕೋಟ್ ದೇಸ್‌ರಾಜ್‌ನ ಕಿರಿದಾದ ಬೀದಿಗಳಲ್ಲಿ ಅವರು ಹೋಗುತ್ತಿದ್ದಂತೆ ಗ್ರಾಮದ ಜನರು ಅವರನ್ನು ಭವ್ಯವಾಗಿ ಸ್ವಾಗತಿಸಿದರು.
ಡೋಲ್ ಬಾರಿಸುತ್ತಾ, ತಮ್ಮ ಮನೆಗಳ ಛಾವಣಿಯಿಂದ ಮಹಿಳೆಯರು ಹೂಮಳೆ ಸುರಿಸಿ, ಬಾಬಾ ಪುರಾನ್ ಸಿಂಗ್ ಅವರಿಗೆ ಹಾರ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರು. ಅವರೆಲ್ಲಾ ಹಳ್ಳಿಯ ಹುಡುಗನೊಬ್ಬ ಊರು ನೋಡಲು ಬಂದಿದ್ದಾನೆ ಎಂದರು.
ಬಾಬಾ ಪುರಾನ್ ಸಿಂಗ್ ಚಿಕ್ಕವರಿದ್ದಾಗ ತಮ್ಮೊಂದಿಗಿದ್ದವರ ಹೆಸರುಗಳನ್ನು ನೆನಪಿಸಿಕೊಂಡು ಈಗ ಅವರು ಎಲ್ಲಿದ್ದಾರೆ ಎಂದು ಕೇಳಿದರು. ಡಿಜಿಟಲ್ ಸೃಷ್ಟಿಕರ್ತ ಮತ್ತು ಬ್ಲಾಗರ್ ನಾಸಿರ್ ಧಿಲ್ಲೋನ್ ಅವರು ಈ ಸಭೆಯನ್ನು ಏರ್ಪಡಿಸಿದ್ದು ಪಂಜಾಬಿ ಲೆಹರ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ತುಂಬಾ ಹೃದಯಸ್ಪರ್ಶಿ ವಿಡಿಯೋ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಮಾಡಿದ್ದಾರೆ.