ಆಪಲ್ ಭಾರತದಲ್ಲಿ ತನ್ನ ಮೊದಲ ಸ್ಟೋರ್ ಅನ್ನು ಏಪ್ರಿಲ್ 18 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಪ್ರಾರಂಭಿಸಿದೆ. ಆಪಲ್ ಸ್ಟೋರ್ ಅದ್ಧೂರಿ ಉದ್ಘಾಟನೆಯ ಮುನ್ನವೇ, ಆಪಲ್ ಅಭಿಮಾನಿಗಳು ಅಂಗಡಿಯ ಹೊರಗೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
ಭಾರತದ ಮೊದಲ ಆಪಲ್ ಸ್ಟೋರ್ ಅನ್ನು ತೆರೆಯುವುದಕ್ಕಾಗಿ ಕಂಪನಿ ಸಿಇಒ ಟಿಮ್ ಕುಕ್ ಸ್ವತಃ ಮುಂಬೈಗೆ ಆಗಮಿಸಿದ್ದಾರೆ. ಭಾರತದ ಮೊದಲ ಆಪಲ್ ಸ್ಟೋರ್ ಅನ್ನು ಅವರೇ ಉದ್ಘಾಟಿಸಿದ್ರು. ಕಾರ್ಯಕ್ರಮದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದ ಟಿಮ್ ಕುಕ್ ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಅವಕಾಶ ಮಾಡಿಕೊಟ್ಟರು.
ಅಭಿಮಾನಿಯೊಬ್ಬ 1984 ರಲ್ಲಿ ಖರೀದಿಸಿದ ವಿಂಟೇಜ್ ಆಪಲ್ ಕಂಪ್ಯೂಟರ್ ಅನ್ನು ಹೊತ್ತೊಯ್ಯುತ್ತಿರುವ ದೃಶ್ಯವೂ ಕಂಡು ಬಂತು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ನಿಗದಿಯಾಗಿತ್ತು. ಆದರೆ ಅದಕ್ಕಿಂತ ಮುನ್ನವೇ ಹಲವಾರು ಅಭಿಮಾನಿಗಳು ಅಂಗಡಿಯ ಹೊರಗೆ ಸಾಲುಗಟ್ಟಿ ನಿಂತಿದ್ದರು. ಅದರಲ್ಲೂ ಈ ಮೂವರು ವ್ಯಕ್ತಿಗಳಂತೂ ಇಡೀ ರಾತ್ರಿ ಕಾದು ಕುಳಿತಿದ್ದು ವಿಶೇಷವಾಗಿತ್ತು.
ಹೌದು ಬೇರೆ ನಗರಗಳಿಂದ ಬಂದಿರುವ ಪುರವ್, ಮಾಧವ್ ಮತ್ತು ಕಾರ್ತಿಕ್, ಅಂಗಡಿ ತೆರೆದಾಗ ಸರತಿಯಲ್ಲಿ ಮೊದಲಿಗರಾಗಿರಬೇಕು ಅನ್ನೋ ಆಕಾಂಕ್ಷೆಯೊಂದಿಗೆ ಇಡೀ ರಾತ್ರಿ ಅಂಗಡಿಯ ಹೊರಗೆ ಕಾದಿದ್ದರು. ಕಳೆದ ರಾತ್ರಿ 8 ಗಂಟೆಯಿಂದ ಸುಮಾರು 12 ಗಂಟೆಗಳ ಕಾಲ ಕಾದಿದ್ದಾರೆ.
ಆಪಲ್ ಉತ್ಪನ್ನಗಳ ಅಭಿಮಾನಿಗಳು ಭಾರತದಲ್ಲಿ ಮಳಿಗೆಯ ಪ್ರಾರಂಭದ ಬಗ್ಗೆ ಉತ್ಸುಕರಾಗಿದ್ದಾರೆ. ಹಾಗೆಯೇ ಆಪಲ್ ಅಭಿಮಾನಿಗಳು ಕಾರ್ಯಕ್ರಮದ ಹಲವಾರು ಚಿತ್ರಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.