ಹುಬ್ಬಳ್ಳಿ: ಬಿಜೆಪಿಯ ಕೆಲ ನಾಯಕರಿಂದ ನಾನು ನೋವು ಅನುಭವಿಸಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್, ಹುಬ್ಬಳ್ಳಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿಯ ಕೆಲ ನಾಯಕರಿಂದ ನಾನು ನೋವು ಅನುಭವಿಸಿದ್ದೇನೆ. ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಕೆಲವರು ಕಾರಣರಾಗಿದ್ದಾರೆ. ಅಂಥವರ ಹೆಸರು ಬಹಿರಂಗಪಡಿಸುವ ಕಾಲ ಬಂದಿದೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಅವಕಾಶವಾದಿ ಎಂದು ಹೇಳುತ್ತಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರದಲ್ಲಿ ನಾನು ಮಂತ್ರಿಯಾಗಲಿಲ್ಲ, ನನಗೆ ಅಧಿಕಾರದ ಆಸೆ ಇದ್ದಿದ್ದರೆ ಮಂತ್ರಿಯಾಗುತ್ತಿದ್ದೆ. ಮಂತ್ರಿಯಾಗುವ ಅವಕಾಶ ಇತ್ತು. ಆದರೆ ನಾನೇ ನಿರಾಕರಿಸಿದೆ. ನನಗೆ ಕಲ್ಯಾಣ ಕರ್ನಾಟಕ ಸೇರಿ ಹಲವು ಭಾಗದ ಜವಾಬ್ದಾರಿ ಕೊಟ್ಟ ರು. ಅತ್ಯಂತ ನಿಷ್ಠೆ ಪ್ರಾಮಾಣಿಕನಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಸಿಎಂ ಆಗಿದ್ದಾಗ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರೈತರ ಸಾಲ ಮನ್ನಾ ಮಾಡಿದ್ದೇನೆ. ದಿನಗೂಲಿ ನೌಕರರನ್ನು ಖಾಯಂ ಮಾಡಿದ್ದೇನೆ. ಜನ ಇಂದಿಗೂ ಅದನ್ನು ನೆನೆಪಿಸಿಕೊಳ್ಳುತ್ತಾರೆ ಎಂದರು.
ನನಗೆ ಟಿಕೆಟ್ ಕೈತಪ್ಪಲು ಕೆಲ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಮುಂದೆ ನನ್ನ ಹೆಸರಿತ್ತು. ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್.ಸಂತೋಷ್ ಕಾರಣ. ಕೇವಲ ಫೋನ್ ಕಾಲ್ ಮಾಡಿ ನನಗೆ ಟಿಕೆಟ್ ಇಲ್ಲ ಅಂದ್ರು. ಬಿಜೆಪಿಯಿಂದ ನನಗೆ ಅಪಮಾನವಾಗಿದೆ ಎಂದು ಕಿಡಿಕಾರಿದರು.