ಬಳ್ಳಾರಿ ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ರೆಬೆಲ್ ಆಗಿರುವ ಮಾಜಿ ಶಾಸಕ ಅನಿಲ್ ಲಾಡ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವುದಾಗಿ ಗುಡುಗಿದ್ದಾರೆ. ಅಷ್ಟೇ ಅಲ್ಲದೇ ತಮಗೆ ಟಿಕೆಟ್ ನೀಡದ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಚುನಾವಣೆ ಮುಗಿಯುವವರೆಗೆ ಪ್ರತಿಭಟನಾ ಸೂಚಕವಾಗಿ ಕಪ್ಪು ಪಟ್ಟಿ ಧರಿಸುವುದಾಗಿ ಹೇಳಿದ್ದಾರೆ. ಕಳೆದ ಬಾರಿ ಅಲ್ಪ ಮತದಿಂದ ನಾನು ಸೋಲಬೇಕಾಯ್ತು. ಆದ್ರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡದೇ ವಂಚಿಸಿದೆ.
ತನಗೆ ಟಿಕೆಟ್ ನೀಡದಿರಲು ಕಾರಣವೇನು ಎನ್ನುವುದರ ಬಗ್ಗೆಯೂ ಪಕ್ಷ ಇದುವರೆಗೂ ನೇರವಾಗಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಯಲ್ಲಿರಲು ನಾನು ಕಾರಣ.
ಇತ್ತೀಚಿಗೆ ದೆಹಲಿ ಭೇಟಿ ವೇಳೆ ಎಐಸಿಸಿ ನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಯವರಿಗೆ ಬಳ್ಳಾರಿ ನಗರ ಕ್ಷೇತ್ರದ ಬಗ್ಗೆ ವಾಸ್ತವಾಂಶಗಳನ್ನು ತಿಳಿಸಿದ್ದೆ. ಆದರೆ ಚುನಾವಣೆಗೆ ಅಭ್ಯರ್ಥಿಗಳನ್ನು ಯಾವ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗುತ್ತದೆ ? ಆಯ್ಕೆ ಪ್ರಕ್ರಿಯೆಗಳೇನು ಎಂದು ಪ್ರಶ್ನಿಸಿದ್ದಾರೆ. ಭರತ್ ರೆಡ್ಡಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿರುವ ಬಗ್ಗೆಯೂ ಅನಿಲ್ ಲಾಡ್ ಕಿಡಿಕಾರಿದ್ದಾರೆ.