ಗ್ರೀನ್ ಟೀಯನ್ನು ಆರೋಗ್ಯದ ಗಣಿಯೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆರೋಗ್ಯ ತಜ್ಞರು ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಗ್ರೀನ್ ಟೀಯನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕುಡಿದರೆ ಮಾತ್ರ ಅದು ಆರೋಗ್ಯಕ್ಕೆ ಪ್ರಯೋಜನಕಾರಿ. ಅದನ್ನು ಕುಡಿಯಲು ಸರಿಯಾದ ಸಮಯವನ್ನು ತಿಳಿದಿರಬೇಕು, ಇಲ್ಲದಿದ್ದರೆ ಸಮಸ್ಯೆಯಾಗಬಹುದು.
ಗ್ರೀನ್ ಟೀ ಪ್ರಯೋಜನಗಳು
ಕ್ಯಾನ್ಸರ್ ತಡೆಗಟ್ಟುವಿಕೆ
ಕ್ಯಾನ್ಸರ್ ಬಹಳ ಗಂಭೀರವಾದ ಕಾಯಿಲೆ. ಗ್ರೀನ್ ಟೀ ಕುಡಿಯುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ಇದರಲ್ಲಿರುವ ಪಾಲಿಫಿನಾಲ್‌ಗಳು, ಗಡ್ಡೆ ಮತ್ತು ಕ್ಯಾನ್ಸರ್ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತವೆ. ವಿಶೇಷವಾಗಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯುವ ಸಾಮರ್ಥ್ಯ ಗ್ರೀನ್ ಟೀಯಲ್ಲಿದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಗ್ರೀನ್ ಟೀಯನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದು ರಕ್ತನಾಳಗಳಲ್ಲಿನ ಅಡಚಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ.
ಚರ್ಮದ ಸೋಂಕು ತಡೆಗಟ್ಟುತ್ತದೆ
ಚರ್ಮವು ಹಾನಿಗೊಳಗಾದಾಗ, ಜೀವಕೋಶಗಳಿಗೆ ಮರುಜೀವ ತುಂಬಬೇಕಾದಾಗ ಗ್ರೀನ್ ಟೀ ಕುಡಿಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಚರ್ಮದ ಸೋಂಕಿನ ವಿರುದ್ಧ ರಕ್ಷಣೆ ನೀಡಬಲ್ಲದು. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗ್ರೀನ್ ಟೀ ಕುಡಿಯುವುದರಿಂದ ಚರ್ಮವು ಟೋನ್ ಆಗುತ್ತದೆ ಮತ್ತು ಮೊಡವೆಗಳು ಕಡಿಮೆಯಾಗುತ್ತವೆ.
ತೂಕ ನಷ್ಟದಲ್ಲಿ ಪರಿಣಾಮಕಾರಿ
ಗ್ರೀನ್ ಟೀಯಲ್ಲಿರುವ ಎಂಟಿಒಕ್ಸಿಡೆಂಟ್‌ಗಳು ಚಯಾಪಚಯವನ್ನು ಹೆಚ್ಚಿಸುತ್ತವೆ. ಇದನ್ನು ಕುಡಿಯುವುದರಿಂದ ದೇಹದ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ವ್ಯಾಯಾಮಕ್ಕೂ ಮೊದಲು ಅದನ್ನು ಕುಡಿಯುವುದು ಉತ್ತಮ.
ಗ್ರೀನ್ ಟೀ ಯಾವಾಗ ಕುಡಿಯಬೇಕು?
ಊಟಕ್ಕಿಂತ ಸುಮಾರು ಒಂದು ಗಂಟೆ ಮೊದಲು ಗ್ರೀನ್ ಟೀ ಕುಡಿಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಟ್ಯಾನಿನ್ ಅನ್ನು ಹೊಂದಿರುತ್ತದೆ. ವಾಕರಿಕೆ, ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಊಟವಾದ ತಕ್ಷಣ ಇದನ್ನು ಕುಡಿಯಬೇಡಿ. ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಡಿ. ಅದರ ಜೊತೆಗೆ ಲಘುವಾದ ತಿನಿಸುಗಳನ್ನು ಸೇವಿಸಿ. ದಿನಕ್ಕೆ ಗರಿಷ್ಠ 3 ಕಪ್ ಗ್ರೀನ್ ಟೀ ಕುಡಿಯಬಹುದು. ಅದಕ್ಕಿಂತ ಹೆಚ್ಚು ಕುಡಿದರೆ ಸಮಸ್ಯೆಯಾಗುತ್ತದೆ. ಮಲಗುವ ಮುನ್ನ ಅಪ್ಪಿತಪ್ಪಿಯೂ ಗ್ರೀನ್ ಟೀ ಸೇವನೆ ಬೇಡ. ಮಲಗುವ ಮೊದಲು ಕುಡಿಯುವುದರಿಂದ ಡಿಹೈಡ್ರೇಶನ್ ಉಂಟಾಗಬಹುದು.