ಮೊಬೈಲ್ ಕದ್ದ ಕಳ್ಳನನ್ನು 27 ವರ್ಷದ ಮಹಿಳೆ ಹಿಂಬಾಲಿಸಿ ಹಿಡಿದು ಧೈರ್ಯ ತೋರಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ.
27 ವರ್ಷದ ಗ್ರಾಫಿಕ್ ಡಿಸೈನರ್ ನೆಜಲ್ ಶುಕ್ಲಾ, ತನ್ನ ಫೋನ್ ಕದ್ದ ಕಳ್ಳನನ್ನು ಜುಹುದಿಂದ ಅಂಧೇರಿಯವರೆಗೆ ಬೆನ್ನಟ್ಟಿ ಅಂತಿಮವಾಗಿ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಹುವಿನ ಕಪಾಸ್ವಾಡಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಜಲ್ ಶುಕ್ಲಾ ತನ್ನ ಕೆಲಸ ಮುಗಿಸಿ ಸಾಂತಾಕ್ರೂಜ್ ರೈಲು ನಿಲ್ದಾಣಕ್ಕೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ತಕ್ಷಣವೇ ನೆಜಲ್ ಶುಕ್ಲಾ ದಾರಿಯಲ್ಲಿ ಹಾದುಹೋಗುತ್ತಿದ್ದ ಆಟೋ ರಿಕ್ಷಾವನ್ನು ಹತ್ತಿ ಕಳ್ಳನನ್ನು ಹಿಂಬಾಲಿಸುತ್ತಾ ಹಿಡಿಯಲು ಮುಂದಾಗುತ್ತಾರೆ. ಆದರೆ ಇದರಲ್ಲಿ ಯಶಸ್ವಿಯಾಗಲಿಲ್ಲ. ನಂತರ ಬೈಕ್ ಸವಾರನ ಸಹಾಯ ಪಡೆದು ಬೈಕ್ ನಲ್ಲಿ ಹಿಂಬದಿ ಕುಳಿತು ಕಳ್ಳನನ್ನ ಹಿಂಬಾಲಿಸುತ್ತಾರೆ.
ಇಬ್ಬರೂ ಜುಹುವಿನಿಂದ ಅಂಧೇರಿ ಪಶ್ಚಿಮಕ್ಕೆ ಏಳು ನಿಮಿಷಗಳ ಕಾಲ ಬೈಕ್ ನಲ್ಲಿ ಕಳ್ಳನನ್ನ ಹಿಂಬಾಲಿಸುತ್ತಾರೆ. ಆದರೆ ಕಳ್ಳ ಕಿರಿದಾದ ರಸ್ತೆಯಲ್ಲಿ ತಪ್ಪಿಸಿಕೊಳ್ಳುತ್ತಾನೆ.
ಬಳಿಕ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಬೈಕ್ ಸವಾರನಿಗೆ ನೆಜಲ್ ಶುಕ್ಲಾ ಮನವಿ ಮಾಡಿದ್ದಾರೆ.
ಅವರು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ನೆಜಲ್ , ಆರೋಪಿ ಮೊಹ್ಸಿನ್ ಮೊಹಮ್ಮದ್ ರಫೀಕ್ ಖಾನ್ ನನ್ನು ಗುರುತಿಸಿದರು. ನಿಧಾನವಾಗಿ ಆಕೆ ಅವನ ಹತ್ತಿರ ಬರ್ತಿದ್ದಂತೆ ಆಕೆಯ ಜೊತೆಗೆ ಬಂದಿದ್ದ ಬೈಕ್ ಸವಾರ ಕಳ್ಳನ ಕಾಲರ್ ಹಿಡಿಯುತ್ತಾರೆ.
ಈ ವೇಳೆ ಕಳ್ಳ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಆರೋಪಿಯು ಇಷ್ಟೊತ್ತಿಗಾಗಲೇ ಮಹಿಳೆಯ ಮೊಬೈಲ್ ಫೋನ್ ಅನ್ನು ತನ್ನ ಗ್ಯಾಂಗ್ ಸದಸ್ಯರಿಗೆ ನೀಡಿದ್ದ. ಬಳಿಕ ಮಹಿಳೆ ಡಿಎನ್ ನಗರ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಕಳ್ಳತನವಾದ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ ಎಂದು ಡಿಎನ್ ನಗರ ಪೊಲೀಸ್ ಠಾಣೆಯ ಎಪಿಐ ರಾಕೇಶ್ ಪವಾರ್ ತಿಳಿಸಿದ್ದಾರೆ.