ಸ್ಪೇನ್: ಈಗ ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಸಾಗಿದೆ. ಇಂದಿನ ಆಹಾರ ಪದ್ಧತಿ, ಪರಿಸರದಿಂದಾಗಿ ಇವು ವೇಗ ಪಡೆದುಕೊಳ್ಳುತ್ತಿವೆ. ಬಹುತೇಕ ಎಲ್ಲಾ ದೇಶಗಳಲ್ಲಿಯೂ ರೋಗಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಸಾಮಾನ್ಯವಾಗಿ ಕ್ಯಾನ್ಸರ್ ಆರಂಭದಲ್ಲಿ ಪತ್ತೆಯಾಗುವುದೇ ಕಷ್ಟ. ಆದರೆ ಇದೀಗ ಸ್ಪೇನ್ನ ವಿಜ್ಞಾನಿಗಳು ಅಗ್ಗದ ಮತ್ತು ಸುಲಭವಾದ ಮೊಬೈಲ್ ಪರೀಕ್ಷಾ ಕಿಟ್ಗಳನ್ನು ಅಭಿವೃದ್ಧಿಪಡಿಸಿದ್ದು, ಅದು ಮೂರು ಗಂಟೆಗಳಲ್ಲಿ ಕ್ಯಾನ್ಸರ್ ಅನ್ನು ಪತ್ತೆ ಮಾಡುತ್ತದೆ ಎನ್ನಲಾಗಿದೆ.
ಬಾರ್ಸಿಲೋನಾದ ಸೆಂಟರ್ ಫಾರ್ ಜೀನೋಮಿಕ್ ರೆಗ್ಯುಲೇಶನ್ನ ತಂಡವು ಅಭಿವೃದ್ಧಿಪಡಿಸಿದ ತಂತ್ರವು ರಕ್ತದ ಮಾದರಿಗಳಲ್ಲಿ ಇರುವ ರೈಬೋನ್ಯೂಕ್ಲಿಯಿಕ್ ಆಮ್ಲವನ್ನು (ಆರ್ಎನ್ಎ) ವಿಶ್ಲೇಷಿಸಲು ನ್ಯಾನೊ ತಂತ್ರಜ್ಞಾನವನ್ನು ಬಳಸುತ್ತದೆ. ನೇಚರ್ ಬಯೋಟೆಕ್ನಾಲಜಿ ಜರ್ನಲ್ನಲ್ಲಿ ಪ್ರಕಟವಾದ ಈ ತಂತ್ರವು ಕೃತಕ ಬುದ್ಧಿಮತ್ತೆ ಸಾಧನಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಕೆಲವು ಕ್ಯಾನ್ಸರ್ಗಳ ಅಸ್ತಿತ್ವವನ್ನು ಸೂಚಿಸುತ್ತದೆ ಎನ್ನಲಾಗಿದೆ.
“ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಮತ್ತು ಕೃತಕ ಬುದ್ಧಿಮತ್ತೆ ಸಾಧನಗಳೊಂದಿಗೆ ಸಂಯೋಜಿಸುವುದು ನಮ್ಮ ಗುರಿಯಾಗಿದೆ, ಮೂರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಜೈವಿಕ ಮಾದರಿಯ ಮಾರಣಾಂತಿಕತೆಯನ್ನು ಇವು ನಿರ್ಧರಿಸುತ್ತವೆ. ಪ್ರತಿ ಮಾದರಿಗೆ 50 ಯುರೋಗಳಿಗಿಂತ ಹೆಚ್ಚು ವೆಚ್ಚವಿಲ್ಲ” ಎಂದು ಹಿರಿಯ ಡಾ ಇವಾ ನೊವೊವಾ ಹೇಳಿದ್ದಾರೆ.