ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎದುರು ಸ್ಪರ್ಧೆಗಿಳಿದ ಸಚಿವ ವಿ. ಸೋಮಣ್ಣ ಅವರಿಗೆ ಮೊದಲ ದಿನವೇ ಬಂಡಾಯದ ಬಿಸಿ ತಟ್ಟಿದೆ.
ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹಾಗೂ ವರುಣಾ ಕ್ಷೇತ್ರದ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವರುಣದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಸೋಮಣ್ಣಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.
1980 ರಿಂದ ಸಂಘ ಪರಿವಾರದ ಸ್ವಯಂಸೇವಕ ಮತ್ತು ಕಾರ್ಯಕರ್ತರನಾಗಿ ದುಡಿದಿದ್ದೇನೆ. ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಭರವಸೆ ಹೊಂದಿದ್ದೆ. 40 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದರೂ ನನ್ನನ್ನು ಪರಿಗಣಿಸದ ಕಾರಣ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತೋಟದಪ್ಪ ಬಸವರಾಜು ತಿಳಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ 37,819 ಮತ ಪಡೆದಿದ್ದೇನೆ. ಈ ಬಾರಿ ಗೆಲ್ಲುವ ವಿಶ್ವಾಸವಿತ್ತು. ಆದರೆ ನನಗೆ ಟಿಕೆಟ್ ನಿರಾಕರಿಸಿದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.