ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತೀವ್ರತೆ ಭಾರಿ ಹೆಚ್ಚಾಗಿದ್ದು, ಕಲಬುರ್ಗಿಯಲ್ಲಿ ಗುರುವಾರ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಈ ಸಲದ ಬೇಸಿಗೆಯಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣಾಂಶವಾಗಿದ್ದು, ರಾಯಚೂರಿನಲ್ಲಿ 40 ಡಿಗ್ರಿ ತಾಪಮಾನ ದಾಖಲಾಗಿದೆ.
ರಾಜ್ಯದಾದ್ಯಂತ ಕಳೆದ ವಾರದಿಂದ ಬಿಸಿಲ ಬೇಗೆ ಹೆಚ್ಚಾಗುತ್ತಿದೆ. ಬಿಸಿಲ ಝಳಕ್ಕೆ ಜನ ತತ್ತರಿಸಿದ್ದಾರೆ. ತಂಪು ಪಾನೀಯ, ಎಳನೀರು, ಐಸ್ ಕ್ರೀಂ ಮೊರೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಯಲ್ಲಿ ಜನ ಮನೆಯಿಂದ ಹೊರಗೆ ಬರುತ್ತಿಲ್ಲ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡಿದೆ. ಏಪ್ರಿಲ್ 5 ರಿಂದ 13ರವರೆಗೆ ಆರು ದಿನ 40 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ವಾಡಿಗೆಗಿಂತ ಎರಡು ಡಿಗ್ರಿ ಹೆಚ್ಚಳ ಆಗಿದೆ. ರಾಯಚೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗದಗ 38.9, ಕೊಪ್ಪಳ 38.07, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ 37.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರದಿಂದ ಬೀಸುತ್ತಿರುವ ಗಾಳಿಯಲ್ಲಿ ತೇವಾಂಶ ಇಲ್ಲದ ಕಾರಣ ಉಷ್ಣಾಂಶದಲ್ಲಿ ಏರಿಕೆ ಕಂಡಿದೆ. ಕರಾವಳಿಯಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.