ಕಾಡಾನೆಗಳು ಆಗಾಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾವಳಿ ಇಡುವುದು ಸಾಮಾನ್ಯ. ಅಷ್ಟೆ ಅಲ್ಲ ಗ್ರಾಮಸ್ಥರ ಮೇಲೆ ದಾಳಿಯೂ ನಡೆಸುತ್ತಿರುತ್ತೆ. ಇತ್ತಿಚೆಗೆ ಹೊನ್ನಾಳಿ ತಾಲ್ಲೂಕಿನ ಜಿನಹಳ್ಳಿ ಬಳಿ ಕಾಡಾನೆ ಜನರು ಬದುಕುವುದನ್ನೇ ದುಸ್ತರ ಮಾಡಿ ಹಾಕಿತ್ತು. ಇದೇ ಕಾರಣಕ್ಕಾಗಿ ಕಾಡಾನೆಯನ್ನ ಸೆರೆ ಹಿಡಿಯಲು ತಂಡವೊಂದು ಸ್ಥಳಕ್ಕೆ ಕರೆಯಿಸಲಾಗಿದೆ. ಆ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿದ್ದರಿಂದ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯ ಡಾ. ಎಸ್. ವಿನಯ್ ಅವರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ 6 ತಜ್ಞ ವೈದ್ಯರ ತಂಡ ಶಿವಮೊಗ್ಗಕ್ಕೆ ಬಂದಿದ್ದು, ಡಾ.ವಿನಯ್ ಅವರ ಆರೋಗ್ಯ ತಪಾಸಣೆ ನಡೆಸಿ ಬೆಂಗಳೂರಿಗೆ ವಿಶೇಷ ಆಂಬುಲೆನ್ಸ್ನಲ್ಲಿ ಜೀರೊ ಟ್ರಾಫಿಕ್ ಮೂಲಕ ಕರೆದೊಯ್ಯಲಾಗಿದೆ ಎಂದು ಸಹೋದ್ಯೋಗಿ ಡಾ.ಮುರಳಿ ಮನೋಹರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆನೆ ಸೆರೆ ಕಾರ್ಯಾಚರಣೆ ವೇಳೆ ಡಾ.ವಿನಯ್ ಬೆನ್ನಿನ ಮೇಲೆ ಸಲಗ ಕಾಲಿಟ್ಟು ತುಳಿದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಓಡಿಹೋಗಲು ಯತ್ನಿಸಿ ಜಾರಿ ಬಿದ್ದ ವಿನಯ್ ಅವರ ಬೆನ್ನ ಮೇಲೆ ಆನೆ ಕಾಲಿಟ್ಟಿದೆ. ಇದರಿಂದ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗಿದೆ.