ಇನ್ಮುಂದೆ ರಾಜಸ್ಥಾನದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದ ಪೊಲೀಸರು ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಅಂತಹ ಉಲ್ಲಂಘನೆಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮದಲ್ಲಿ ಅವರ ವಿರುದ್ಧ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರ ಸೂಚನೆ ಮೇರೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ) ವಿಕೆ ಸಿಂಗ್ ಅವರು ಈ ಸಂಬಂಧ ನಿರ್ದೇಶನಗಳನ್ನು ಹೊರಡಿಸಿದ್ದಾರೆ.
ಹೆಲ್ಮೆಟ್ ಧರಿಸದ ಮತ್ತು ದ್ವಿಚಕ್ರ ವಾಹನದಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಸಂಚರಿಸುವ, ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದ, ಕೆಂಪು ದೀಪವನ್ನು ಜಂಪ್ ಮಾಡುವ, ಮದ್ಯಪಾನ ಮಾಡಿ ಚಾಲನೆ ಮತ್ತು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳು ಮೋಟಾರು ವಾಹನ ಕಾಯಿದೆಯ ಪ್ರಕಾರ ಇರುವ ಸಾಮಾನ್ಯ ದಂಡದ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ. ಜೊತೆಗೆ ಅಂತಹ ಪೊಲೀಸರ ವಿರುದ್ಧವೂ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.