ಮುಂಬೈ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಸಕ್ಕರೆ ದರ ಶೇಕಡ 6 ರಷ್ಟು ಏರಿಕೆಯಾಗಿದೆ.
ಕಳೆದ ಎರಡು ವಾರದಲ್ಲಿ ಶೇಕಡ 6 ರಷ್ಟು ಏರಿಕೆ ಕಂಡಿರುವ ಸಕ್ಕರೆ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಕಬ್ಬು ಉತ್ಪಾದನೆ ಈ ವರ್ಷ ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ಜಾಸ್ತಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಸಕ್ಕರೆ ಬೆಲೆ ಭಾರಿ ಏರಿಕೆ ಕಂಡಿದೆ.
ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹವಾಮಾನ ವೈಪರೀತ್ಯ ಕಾರಣ ಈ ಬಾರಿ ಕಬ್ಬು ಉತ್ಪಾದನೆ ಕುಸಿತ ಕಂಡಿದ್ದು, ಸಕ್ಕರೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್ ನಿಂದ ದೇಶದಲ್ಲಿ ತಾಪಮಾನ ಹೆಚ್ಚಾಗಿ ತಂಪು ಪಾನೀಯ, ಐಸ್ ಕ್ರೀಮ್ ಬಳಕೆ ಹೆಚ್ಚಾಗಿದೆ. ಸಕ್ಕರೆ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ದರ ಹೆಚ್ಚಳಕ್ಕೆ ಕಾರಣವೆಂದು ಹೇಳಲಾಗಿದೆ.