ನವದೆಹಲಿ: ದೇಶದ ಪ್ರಮುಖ ಸಂಸ್ಥೆಯಾದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್ಐ) ಇತ್ತೀಚಿನ ಅಧ್ಯಯನವು ತಾಜಾ ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಅದು ಮಾನವನ ಸೇವನೆಗೆ ಯೋಗ್ಯವಲ್ಲ ಎಂದು ಹೇಳಿದೆ.
ಹಸುಗಳು ಮತ್ತು ಗೂಳಿಗಳ ಮೂತ್ರದ ಮಾದರಿಗಳ ಮೇಲೆ ನಡೆಸಿದ ಪೀರ್-ರಿವ್ಯೂಡ್ ಸಂಶೋಧನೆಯು ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿದಿದೆ. ಇದರಲ್ಲಿ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಂನ ಉಪಸ್ಥಿತಿಯೂ ಸೇರಿದೆ. ಇದು ಸಾಮಾನ್ಯವಾಗಿ ಮಾನವರಲ್ಲಿ ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತದೆ.
73 ಮೂತ್ರದ ಮಾದರಿಗಳ ವಿಶ್ಲೇಷಣೆಯಲ್ಲಿ, ಎಮ್ಮೆಯ ಮೂತ್ರದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಿರುವುದು ಕಂಡುಬಂದಿದೆ. ಎಮ್ಮೆಯ ಮೂತ್ರವು ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪಾಂಟಿಸಿಯಂತಹ ಬ್ಯಾಕ್ಟೀರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಭೋಜ್ ರಾಜ್ ಸಿಂಗ್ ಹೇಳಿದ್ದಾರೆ.
ಇನ್ಸ್ಟಿಟ್ಯೂಟ್ನಲ್ಲಿ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಸಿಂಗ್ ಅವರು ಸ್ಥಳೀಯ ಡೈರಿ ಫಾರ್ಮ್ಗಳಿಂದ ಮೂರು ರೀತಿಯ ಹಸುಗಳಾದ ಸಾಹಿವಾಲ್, ಥಾರ್ಪಾರ್ಕರ್ ಮತ್ತು ವಿಂದಾವನಿ (ಅಡ್ಡ ತಳಿ) ಮೇಲೆ ಸಂಶೋಧನೆ ನಡೆಸಿದರು. ಮಾನವರು ಮತ್ತು ಎಮ್ಮೆಗಳ ಮಾದರಿಗಳನ್ನು ಸಹ ಅಧ್ಯಯನಕ್ಕಾಗಿ ಪರಿಗಣಿಸಲಾಗಿದೆ.
ಐವಿಆರ್ ಐನ ಮಾಜಿ ನಿರ್ದೇಶಕ ಆರ್.ಎಸ್. ಚೌಹಾಣ್ ಅವರು ಈ ಸಂಶೋಧನೆಯನ್ನು ಪ್ರಶ್ನಿಸಿದ್ದಾರೆ. ತಾನು 25 ವರ್ಷಗಳಿಂದ ಗೋಮೂತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಬಟ್ಟಿ ಇಳಿಸಿದ ಗೋಮೂತ್ರವು ಮಾನವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಹಾಗೂ ಕ್ಯಾನ್ಸರ್ ಮತ್ತು ಕೋವಿಡ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬುದನ್ನು ಕಂಡುಕೊಂಡಿದ್ದಾಗಿ ಹೇಳಿದ್ದಾರೆ.