ಬೆಂಗಳೂರು: ಕಾವೇರಿ 2.0 ತಂತ್ರಾಂಶದಿಂದ ನೋಂದಣಿ ಪ್ರಕ್ರಿಯೆಗೆ ಹೊಸ ರೂಪ ನೀಡಲಾಗಿದ್ದು, ಬಳಕೆದಾರರೇ ಸಮಯ ನಿಗದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸ್ಥಿರಾಸ್ತಿ, ಚರಾಸ್ತಿ, ಇತರೆ ನೋಂದಣಿ ಪ್ರಕ್ರಿಯೆ ಸುರಕ್ಷತೆ ಕ್ರಮಗಳೊಂದಿಗೆ 10 ನಿಮಿಷದಲ್ಲಿ ಪೂರ್ಣಗೊಳ್ಳಲಿದ್ದು, ನೋಂದಣಿ ದಾಖಲೆ ಪಡೆಯಲು ಸಾಧ್ಯವಾಗುವಂತೆ ರೂಪಿಸಲಾದ ಕಾವೇರಿ 2.0 ತಂತ್ರಾಂಶ ಜೂನ್ 25ರ ವೇಳೆಗೆ ರಾಜ್ಯದ ಎಲ್ಲಾ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಭ್ಯವಾಗಲಿದೆ.
ಬಳಕೆದಾರರು ಅಗತ್ಯ ವಿವರ, ದಾಖಲೆ ಅಪ್ಲೋಡ್ ಮಾಡಿ ಶುಲ್ಕ ಪಾವತಿಸಿ ನಿರ್ದಿಷ್ಟ ಸಮಯವನ್ನು ಗೊತ್ತು ಪಡಿಸಿಕೊಂಡು ನೋಂದಣಿಗೆ ಸಮಯ ನಿಗದಿ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 24 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಬಳಕೆಯಲ್ಲಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಂತ್ರಾಂಶ ಬಳಕೆ, ನಿರ್ವಹಣೆಯ ತೊಂದರೆ ಸವಾಲುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತಿದ್ದು, ಹಂತ ಹಂತವಾಗಿ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ ವಿಸ್ತರಿಸಲಾಗಿದೆ.
ಪಾಸ್ಪೋರ್ಟ್ ಕಚೇರಿ ಮಾದರಿಯ ನೋಂದಣಿ ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ತಕ್ಕಂತೆ ಕಚೇರಿ ನವೀಕರಣ, ಪುನರ್ ವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ. ನೋಂದಣಿಗೆ ಬರುವ ಮೊದಲೇ ಹಲವು ಸುತ್ತಿನಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಕೇವಲ 10 ರಿಂದ 15 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಆಸ್ತಿಯ ಸರ್ವೇ ನಂಬರ್ ಗಳನ್ನು ಕಾವೇರಿ 2.0 ತಂತ್ರಾಂಶದಲ್ಲಿ ದಾಖಲಿಸುತ್ತಿದ್ದಂತೆ ಅದರ ಮಾಹಿತಿ ಗೊತ್ತಾಗುತ್ತದೆ. ಭೂಮಿ ಸೇರಿದಂತೆ ಭೂ ದಾಖಲೆಗೆ ಸಂಬಂಧಿಸಿದ ಹಲವು ತಂತ್ರಾಂಶಗಳೊಂದಿಗೆ ಇದು ಜೋಡಣೆಯಾಗಿದ್ದು, ಆಸ್ತಿಯ ಸ್ಥಿತಿಗತಿಯ ಮಾಹಿತಿ ಗೊತ್ತಾಗುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಕೊನೆಯ ಕ್ಷಣದವರೆಗೂ ಆಸ್ತಿಯ ಸ್ಥಿತಿಗತಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.