ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಭರ್ಜರಿ ತಯಾರಿ ನಡೆಸುತ್ತಿದ್ದು, ರಾಜ್ಯದಾದ್ಯಂತ ಈಗಾಗಲೇ ಒಂದು ಸುತ್ತಿನ ಪ್ರವಾಸ ಮುಗಿಸಿದ್ದಾರೆ. ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ವರುಣಾ ಕ್ಷೇತ್ರದ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ.
ಸಿದ್ದರಾಮಯ್ಯನವರನ್ನು ಮಣಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ, ಜೆಡಿಎಸ್ ನಾಯಕರು ಭಾರಿ ಲೆಕ್ಕಾಚಾರ ಹಾಕುತ್ತಿದ್ದರ ಮಧ್ಯೆ ಮೊದಲ ಪಟ್ಟಿಯಲ್ಲಿಯೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿತ್ತು. ಆದರೆ ಇದೀಗ ಆ ಅಭ್ಯರ್ಥಿಯನ್ನು ಬದಲಿಸುವ ಚಿಂತನೆ ಜೆಡಿಎಸ್ ಪಕ್ಷದ ನಾಯಕರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.
ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಜೆಡಿಎಸ್, ಈ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದು, ಅವರು ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದರು. ಯಾವಾಗ ಸಿದ್ದರಾಮಯ್ಯ ಈ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್ ಅಭ್ಯರ್ಥಿ ಪ್ರಚಾರ ಕಾರ್ಯ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವರುಣಾದಲ್ಲಿ ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.