ಅಯೋಧ್ಯೆಯಲ್ಲಿರುವ ರಾಮ ಲಲ್ಲಾ ಮೂರ್ತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಲಾಭಿಷೇಕ ನೆರವೇರಿಸಲಿದ್ದಾರೆ. ಈ ಜಲಾಭಿಷೇಕಕ್ಕೆಂದು 155 ದೇಶಗಳಿಂದ ನೀರನ್ನು ತರಲಾಗಿತ್ತು. ಏಪ್ರಿಲ್ 23ರಂದು ನೆರವೇರಲಿರುವ ಈ ಜಲಾಭಿಷೇಕಕ್ಕೆ ಪಾಕಿಸ್ತಾನ ಹಾಗೂ ಚೀನಾಗಳಿಂದಲೂ ನೀರು ತರಿಸಲಾಗುತ್ತಿದೆ.
ಶ್ರೀರಾಮನ ದೆಹಲಿ ಮೂಲದ ಭಕ್ತ ವಿಜಯ್ ಜಾಲಿ 155 ದೇಶಗಳ ನದಿಗಳ ನೀರನ್ನು ಉ.ಪ್ರ. ಮುಖ್ಯಮಂತ್ರಿಗೆ ತಲುಪಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಯೋಗಿ ಆದಿತ್ಯನಾಥ್ ಏಪ್ರಿಲ್ 23ರಂದು ಮಣಿರಾಮ್ ದಾಸ್ ಚಾವ್ನೀ ಆಡಿಟೋರಿಯಂನಲ್ಲಿ ’ಜಲ ಕಳಶ’ ಪೂಜೆ ನೆರವೇರಿಸಲಿದ್ದಾರೆ.
ಇದೇ ವೇಳೆ ಅನೇಕ ದೇಶಗಳ ಗಣ್ಯರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಜಗತ್ತಿನ ಅನೇಕ ಭಾಗಗಳಿಂದ ತರಲಾಗುವ ನೀರಿನ ವಾಹಕಗಳ ಮೇಲೆ ಆಯಾ ದೇಶಗಳ ಹೆಸರು ಇರಲಿದೆ.
ಪಾಕಿಸ್ತಾನದಿಂದ ರಾವಿ ನದಿಯಲ್ಲಿನ ನೀರನ್ನು ಕಲಶ ಪೂಜೆಗೆ ಬಳಸಲಾಗುವುದು. ಪಾಕಿಸ್ತಾನದಿಂದ ಈ ನೀರನ್ನು ದುಬಾಯ್‌ಗೆ ಕಳುಹಿಸಿ, ಅಲ್ಲಿಂದ ದೆಹಲಿಗೆ ತರಲಾಗುವುದು.
ಇದೇ ವೇಳೆ, ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣ ವೇಗದಲ್ಲಿ ಸಾಗುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಹಾ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.