ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಈಗ ಮತ್ತೊಂದು ಹೇಳಿಕೆ ನೀಡಿ ಪ್ರತಿಪಕ್ಷಗಳ ನಾಯಕರ ಟೀಕೆಗೆ ಗುರಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ವ್ಯಸನ ಅಂಟಿಸಿಕೊಂಡಿರುವ ಯುವತಿಯರು ತೂರಾಡುತ್ತ ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಅವರನ್ನು ನೋಡಿದಾಗ ನನಗೆ ಕಾರಿನಿಂದ ಇಳಿದು ಹೋಗಿ ಹೊಡೆದು ಅಮಲು ಇಳಿಸಬೇಕು ಎನಿಸುತ್ತದೆ ಎಂದಿದ್ದಾರೆ.
ನಾವು ಮಹಿಳೆಯರನ್ನು ದೇವತೆಗಳು ಎಂದು ಭಾವಿಸುತ್ತೇವೆ, ಆದರೆ ಈ ಯುವತಿಯರಲ್ಲಿ ದೇವತೆಗಳ ಒಂದಂಶವೂ ಇರಲು ಸಾಧ್ಯವಿಲ್ಲ. ಹೀಗಾಗಿ ಅವರೆಲ್ಲ ಥೇಟ್ ಶೂರ್ಪನಕಿಯರಂತೆ ಕಾಣಿಸುತ್ತಾರೆ ಎಂದು ಕೈಲಾಶ್ ವಿಜಯ ವರ್ಗೀಯ ಹೇಳಿದ್ದು, ಇದಕ್ಕೆ ಪ್ರತಿಪಕ್ಷಗಳ ನಾಯಕರು ಟೀಕಿಸಿದ್ದಾರೆ.