ಬೆಂಗಳೂರು: ಮತದಾರರಿಗೆ ಆಮಿಷ ಒಡ್ಡಿದ ಆರೋಪದ ಮೇಲೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಮೂವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆರ್.ಆರ್. ನಗರ ಕ್ಷೇತ್ರದಲ್ಲಿ ಹಂಚಿದ್ದ ಗಿಫ್ಟ್ ಬಾಕ್ಸ್ ಮೇಲೆ ಡಿ.ಕೆ. ಸುರೇಶ್ ಮತ್ತು ಕುಸುಮಾ ಅವರ ಫೋಟೋಗಳು ಕಂಡುಬಂದಿವೆ. ಫ್ಲೈಯಿಂಗ್ ಸ್ಕ್ವಾಡ್ ಅಸಿಸ್ಟೆಂಟ್ ಕಂಟ್ರೋಲರ್ ಎಂ.ಎಸ್. ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಸಂಸದ ಡಿ.ಕೆ. ಸುರೇಶ್, ಜವರೇಗೌಡನದೊಡ್ಡಿ ನಿವಾಸಿ ಜಗದೀಶ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಏಪ್ರಿಲ್ 5 ರಂದು ಆರ್.ಆರ್. ನಗರದ ಕಾಳೇಗೌಡನ ಲೇಔಟ್ ಎರಡನೇ ಅಡ್ಡ ರಸ್ತೆಯಲ್ಲಿ ಮತದಾರರಿಗೆ ಗಿಫ್ಟ್ ಹಂಚಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಜಗದೀಶ್ ಸಿಕ್ಕಿಬಿದ್ದಿದ್ದ. ಇಬ್ಬರು ಪರಾರಿಯಾಗಿದ್ದರು. ವಸ್ತುಗಳನ್ನು ಜಪ್ತಿ ಮಾಡಿದಾಗ ಅದರ ಮೇಲೆ ಡಿ.ಕೆ. ಸುರೇಶ್ ಮತ್ತು ಕುಸುಮಾ ಅವರ ಫೋಟೋ ಮುದ್ರಿಸಿರುವುದು ಕಂಡುಬಂದಿತ್ತು. ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎನ್.ಸಿ.ಆರ್. ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.