ಕೊರೊನಾ ಬಂದಾಗಿನಿಂದಲೂ ನಾವು ಸೋಂಕಿನಿಂದ ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಆಹಾರಗಳಿಗೆ ಒತ್ತು ನೀಡುತ್ತಿದ್ದೇವೆ. ಪರಿಣಾಮ ಜನರು ನಿಂಬೆಹಣ್ಣು ಸೇರಿದಂತೆ ಅನೇಕ ಆರೋಗ್ಯಕರ ಆಹಾರಗಳ ಸೇವನೆಯನ್ನು ಹೆಚ್ಚಿಸಿದ್ದಾರೆ. ಏಕೆಂದರೆ ನಿಂಬೆಯಲ್ಲಿ ಬಹಳಷ್ಟು ವಿಟಮಿನ್ ಸಿ ಇದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಜನರು ನಿಂಬೆ ಸೇವನೆಯನ್ನು ಹೆಚ್ಚಿಸುತ್ತಾರೆ. ಆದರೆ ಅತಿಯಾದ ನಿಂಬೆ ರಸ ಸೇವನೆ ಹಾನಿಕಾರಕ.
ಅತಿಯಾಗಿ ನಿಂಬೆಹಣ್ಣಿನ ಸೇವನೆಯ ಅನಾನುಕೂಲಗಳು ಟಾನ್ಸಿಲ್ ಸಮಸ್ಯೆ: ಹೆಚ್ಚು ನಿಂಬೆ ಪಾನಕವನ್ನು ಸೇವಿಸಿದರೆ ಗಂಟಲಿಗೆ ಹಾನಿಯಾಗಬಹುದು. ಏಕೆಂದರೆ ಹೆಚ್ಚು ಹುಳಿ ಪದಾರ್ಥಗಳನ್ನು ತಿನ್ನುವುದರಿಂದ ಗಂಟಲು ನೋವು ಮತ್ತು ಟಾನ್ಸಿಲ್ ಸಮಸ್ಯೆಗಳಾಗುತ್ತವೆ.
ಹಲ್ಲುಗಳಿಗೆ ಹಾನಿ: ನಿಂಬೆಯಲ್ಲಿ ಆಮ್ಲೀಯ ಗುಣಗಳು ಕಂಡುಬರುತ್ತವೆ. ಇದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಉಪಯುಕ್ತವಾಗಿದೆ. ಆದರೆ ಅದರ ಅತಿಯಾದ ಬಳಕೆಯು ಹಲ್ಲುಗಳಿಗೆ ಹಾನಿಯನ್ನುಂಟುಮಾಡುತ್ತದೆ. ನಿಂಬೆ ರಸವು ಹಲ್ಲುಗಳ ಸಂಪರ್ಕದಲ್ಲಿ ಅಧಿಕವಾಗಿ ಬಂದರೆ, ಮೇಲಿನ ಪದರವನ್ನು ಅಂದರೆ ದಂತಕವಚವನ್ನು ಹಾಳುಮಾಡುತ್ತದೆ. ಆದ್ದರಿಂದ ನೀವು ನಿಂಬೆ ಉತ್ಪನ್ನವನ್ನು ಸೇವಿಸಿದ ತಕ್ಷಣ ಹಲ್ಲುಜ್ಜುವುದನ್ನು ತಪ್ಪಿಸಬೇಕು.
ಅಜೀರ್ಣ: ನಿಂಬೆಯನ್ನು ಸಾಮಾನ್ಯವಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ಹೆಚ್ಚು ನಿಂಬೆ ಪಾನಕವನ್ನು ಸೇವಿಸಿದರೆ ಅದು ವಿರುದ್ಧ ಪರಿಣಾಮವನ್ನು ಬೀರುತ್ತದೆ. ನಿಂಬೆಹಣ್ಣಿನ ಅತಿಯಾದ ಸೇವನೆಯು ಆಸಿಡ್ ರಿಫ್ಲಕ್ಸ್ ಮತ್ತು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್‌ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ತೊಂದರೆಗೊಳಗಾಗಬಹುದು ಮತ್ತು ವಿಪರೀತ ಪರಿಸ್ಥಿತಿಗಳಲ್ಲಿ ವಾಂತಿ ಕೂಡ ಸಂಭವಿಸಬಹುದು.