
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಭಾನುವಾರ ಬೆಳಿಗ್ಗೆ ವರದಿಯಾದಂತೆ 24 ಗಂಟೆಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಆರು ತಿಂಗಳ ಅತ್ಯಧಿಕ ಅಂದರೆ 3,800 ಕ್ಕೂ ಅಧಿಕ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ತಮಿಳುನಾಡು, ದೆಹಲಿ ಸೇರಿದಂತೆ ಕೆಲವೊಂದು ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಹಾಗೆಯೇ ನವದೆಹಲಿಯಲ್ಲಿ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ಮಧ್ಯೆ ಕೋವಿಡ್ ಬೂಸ್ಟರ್ ಡೋಸ್ ಪಡೆಯುವ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಆದರೆ ಈ ಕುರಿತಂತೆ ಮಾತನಾಡಿರುವ ಖ್ಯಾತ ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಬೂಸ್ಟರ್ ಡೋಸ್ ಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಈಗ ಸೋಂಕು ಹೆಚ್ಚಳವಾಗುತ್ತಿರುವುದು ಹೊಸ ರೂಪಾಂತರದಿಂದ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟಿರುವ ಅವರು, ಆದರೆ ಹಿಂದಿನ ಅಲೆಗಳಲ್ಲಿ ಇದ್ದ ಅಪಾಯ ಇದರಲ್ಲಿ ಇಲ್ಲ. ಹಾಗೆಯೇ ಬೂಸ್ಟರ್ ಡೋಸ್ ಕುರಿತು ಇರುವ ವೈಜ್ಞಾನಿಕ ಪುರಾವೆಗಳು ಸಹ ದುರ್ಬಲವಾಗಿವೆ. ಹಾಗಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳುವುದರಿಂದ ಹೆಚ್ಚು ಸಹಾಯಕವಾಗುವುದಿಲ್ಲ ಎಂದಿದ್ದಾರೆ.