ಮಾನನಷ್ಟ ಮೊಕದ್ದಮೆಯಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅರ್ಜಿಯ ವಾದವನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯವು ಆಲಿಸಿದ್ದು, ಆದೇಶವನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ.
ದೂರುದಾರ ಮತ್ತು ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು 2014 ರಲ್ಲಿ ರಾಹುಲ್ ಗಾಂಧಿಯ ಭಾಷಣವನ್ನು ವೀಕ್ಷಿಸಿದ ನಂತರ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಭಾಷಣದಲ್ಲಿ ರಾಹುಲ್ ಗಾಂಧಿ ಮಹಾತ್ಮ ಗಾಂಧಿ ಹತ್ಯೆಯ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವನ್ನ ಆರೋಪಿಸಿದ್ದರು.
ರಾಹುಲ್ ಗಾಂಧಿ ಅವರು ಈ ದೂರಿಗೆ ಸಂಬಂಧಿಸಿದಂತೆ ಜೂನ್ 2018 ರಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ತಾನು ನಿರಪರಾಧಿ ಎಂದು ಹೇಳಿದ್ದರು.
ಕಳೆದ ವರ್ಷ ರಾಹುಲ್ ಗಾಂಧಿ ತಾನೊಬ್ಬ ಸಂಸದನಾಗಿದ್ದು ಕ್ಷೇತ್ರಕ್ಕೆ ಭೇಟಿ ನೀಡಲು, ಪಕ್ಷದ ಕೆಲಸಕ್ಕೆ ಹಾಜರಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ಕಾಂಗ್ರೆಸ್ ನಾಯಕನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ರಾಜೇಶ್ ಕುಂಟೆ ಅವರು ಗಾಂಧಿಯವರ ಅರ್ಜಿಯನ್ನು ವಿರೋಧಿಸಿದ್ದಾರೆ.
“ಎಲ್ಲಾ ಕಳ್ಳರು ಮೋದಿ ಉಪನಾಮವನ್ನು ಏಕೆ ಹೊಂದಿದ್ದಾರೆ” ಎಂಬ ಟೀಕೆಗಳ ವಿರುದ್ಧ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ನ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಆದರೆ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು ಮತ್ತು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು 30 ದಿನಗಳವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಿತು. ಮರುದಿನ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.