ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದಂತೆ ನಿಮ್ಮನ್ನೂ ಹತ್ಯೆ ಮಾಡೋದಾಗಿ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್‌ಗೆ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ಪುಣೆಯ 23 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಹುಲ್ ತಳೇಕರ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಆದರೆ ಆತ ಕುಡಿದಿದ್ದಾಗ ಸಂದೇಶ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರ್ ಅಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮದ್ಯದ ಅಮಲಿನಲ್ಲಿ ಆತ ಬೆದರಿಕೆ ಹಾಕಿದ್ದಾನೆ. ಆದರೂ ವಿಸ್ತೃತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಜಯ್ ರಾವತ್ ಅವರ ಸಹೋದರ-ಶಾಸಕ ಸುನಿಲ್ ರಾವತ್, ಕಂಜುರ್ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಮುಂಬೈ ಮತ್ತು ಪುಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಶುಕ್ರವಾರ ತಡರಾತ್ರಿ ಖಾರಾಡಿ ಪ್ರದೇಶದಿಂದ ರಾಹುಲ್ ತಳೇಕರ್ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂಜಯ್ ರಾವುತ್ ಅವರನ್ನು ಹಿಂದೂ ವಿರೋಧಿ ಎಂದು ಕರೆದಿದ್ದ ವಾಟ್ಸಾಪ್ ಸಂದೇಶದಲ್ಲಿ ʼದೆಹಲಿಯಲ್ಲಿ ನೀನು ಸಿಕ್ಕರೆ ಎಕೆ 47 ನಿಂದ ಹತ್ಯೆ ಮಾಡಲಾಗುತ್ತದೆ. ಸಿಧು ಮೂಸೆವಾಲಾನನ್ನು ಹತ್ಯೆ ಮಾಡಿದ ರೀತಿಯಲ್ಲೇ ಹತ್ಯೆ ಮಾಡಲಾಗುತ್ತದೆ. ಲಾರೆನ್ಸ್ ಸಂದೇಶವನ್ನು ಗಮನದಲ್ಲಿಟ್ಟುಕೋ. ನೀನು ಅಥವಾ ಸಲ್ಮಾನ್ ಖಾನ್ ಫಿಕ್ಸ್ʼ ಎಂದು ಬೆದರಿಕೆ ಸಂದೇಶ ಕಳಿಸಲಾಗಿತ್ತು.
ಮೂಲತಃ ಜಲ್ನಾದವನಾದ ರಾಹುಲ್ ತಳೇಕರ್, ಪುಣೆಯಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿದ್ದಾನೆ. ಸಂಸದರನ್ನು ದೂರವಾಣಿ ಮೂಲಕ ಸಂಪರ್ಕಿಸಲು ವಿಫಲವಾದ ನಂತರ ಆತ ವಾಟ್ಸಾಪ್ ಮೂಲಕ ರಾವತ್ ಗೆ ನಿಂದನೀಯ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.