
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾಗಿದ್ದು, ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಕುರಿತು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡಲ್ಲ. ನನ್ನ ಕ್ಷೇತ್ರ ಶಿಕಾರಿಪುರದಿಂದಲೇ ಸ್ಪರ್ಧಿಸಬೇಕು ಎಂದು ಸೂಚಿಸಿದ್ದೇನೆ. ಹಾಗಾಗಿ ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡ್ತಾರೆ ಎಂದು ಹೇಳಿದ್ದಾರೆ.
ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂದು ಒತ್ತಡವಿದೆ. ಆದರೆ ವರುಣಾದಿಂದ ಸ್ಪರ್ಧಿಸಲ್ಲ. ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸಬೇಕು ಎಂದು ವರಿಷ್ಠರಿಗೆ ಹೇಳುತ್ತೇನೆ. ವಿಜಯೇಂದ್ರಗೂ ಈ ಬಗ್ಗೆ ತಿಳಿಸುತ್ತೇನೆ. ಇನ್ನು ನಾಲ್ಕೈದು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದರು.