ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಜಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಲಾಗಿದೆ.
ಮಾರ್ಚ್ 30 ರಂದು ನಗರದ ವಿವಿಧ ಭಾಗಗಳಲ್ಲಿ “ಮೋದಿ ಹಟಾವೋ ದೇಶ್ ಬಚಾವೋ” ಎಂಬ ಘೋಷಣಾ ಪತ್ರಗಳನ್ನು ಅನಧಿಕೃತವಾಗಿ ಹಾಕಲಾಗಿದೆ ಎಂದು ಅಹಮದಾಬಾದ್ ಅಪರಾಧ ವಿಭಾಗ ಹೇಳಿದೆ. ಈ ಘಟನೆಗಳ ತನಿಖೆಯ ವೇಳೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ನಟವರ್‌ಭಾಯ್ ಪೋಪಟ್‌ಭಾಯ್, ಜತಿನ್‌ಭಾಯ್ ಚಂದ್ರಕಾಂತ್ ಭಾಯಿ ಪಟೇಲ್, ಕುಲದೀಪ್ ಶರದ್‌ಕುಮಾರ್ ಭಟ್, ಬಿಪಿನ್ ರವೀಂದ್ರಭಾಯಿ ಶರ್ಮಾ, ಅಜಯ್ ಸುರೇಶಭಾಯಿ ಚೌಹಾಣ್, ಅರವಿಂದ್ ಗೊರ್ಜಿಭಾಯಿ ಚೌಹಾಣ್, ಜೀವನ್‌ಭಾಯ್ ವಸುಭಾಯಿ ಮಹೇಶ್ವರಿ ಮತ್ತು ಪರೇಶ್ ವಾಸುದೇವಭಾಯ್ ತುಳಸಿಯಾ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಇಸುದನ್ ಗಧ್ವಿ, ಬಂಧಿತರು ಎಎಪಿ ಪಕ್ಷದ ಕಾರ್ಯಕರ್ತರು. ಪೊಲೀಸರ ಈ ಕ್ರಮವು ಬಿಜೆಪಿ ಭಯಭೀತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷ 22 ರಾಜ್ಯಗಳಲ್ಲಿ “ಮೋದಿ ಹಠಾವೋ, ದೇಶ್ ಬಚಾವೋ” ಎಂಬ ಘೋಷಣೆಗಳೊಂದಿಗೆ ಗುರುವಾರ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನ ಪ್ರಾರಂಭಿಸಿದ ನಂತರ ಈ ಬೆಳವಣಿಗೆಯಾಗಿದೆ.