ಹೊಸ ಭಾಷೆಯೊಂದನ್ನು ಕಲಿಯುವುದು ಹೊಸದೊಂದು ಶಕ್ತಿ ಪಡೆದಂತೆ. ನೀವಿರುವ ಪ್ರದೇಶದ ಸ್ಥಳೀಯ ಭಾಷೆ ಕಲಿತಲ್ಲಿ ಅಲ್ಲಿನ ಜನರೊಂದಿಗೆ ಮಾತನಾಡುವುದು ಮಾತ್ರವಲ್ಲದೇ ಆ ಜನರ ವಿಶೇಷ ಪ್ರೀತಿಗೂ ಪಾತ್ರರಾಗುತ್ತೀರಿ.
ಭಾರತದಲ್ಲಿರುವ ಲಿಥುಯೇನಿಯನ್ ರಾಯಭಾರಿ ಡಯಾನಾ ಮಿಕೆವಿಸಿಯೆನೆ ಹಿಂದಿ ಹಾಗೂ ಸಂಸ್ಕೃತ ಭಾಷೆಗಳನ್ನು ಕಲಿತುಕೊಂಡು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.
“ಗಂಭೀರ ವಿಷಯಗಳ ಬಗ್ಗೆ ಮಾತನಾಡುವುದು ನನಗೆ ಸ್ವಲ್ಪ ಕಷ್ಟವೆನಿಸುತ್ತದೆ. ಆದರೆ ನನಗೆ ಮಾತನಾಡಲು ಬರುತ್ತದೆ. ಎರಡು ವರ್ಷಗಳ ಮಟ್ಟಿಗೆ ನಾನು ಸಂಸ್ಕೃತ ಕಲಿತೆ. ಆದರೆ ಅದು ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಧರ್ಮಗ್ರಂಥಗಳ ಭಾಷೆಯಾಗಿದೆ. ಓದಿ, ಬರೆದು, ಭಾಷಾಂತರ ಮಾಡುವುದನ್ನು ಕಲಿತಿರುವೆ ಆದರೆ ಮಾತನಾಡಲು ಅಲ್ಲ,” ಎನ್ನುತ್ತಾರೆ ಡಯಾನಾ.
ಇದೇ ವೇಳೆ ತಾವು ಹಿಂದಿ ಕಲಿತ ವಿಚಾರವನ್ನು ಹಂಚಿಕೊಂಡ ಡಯಾನಾ, “ನನಗೆ ಸ್ವಲ್ಪ ಹಿಂದಿ ಬರುತ್ತದೆ. ನಾನು ಎರಡು ಅಥವಾ ಮೂರು ಬಾರಿ ಹಿಂದಿ ಕಲಿತೆ ಆದರೆ ಮರೆತಿದ್ದೇನೆ. ಈ ಬಾರಿ ನಾನು ಭಾರತಕ್ಕೆ ಬರಬೇಕಿದ್ದು, ನನ್ನ ಉದ್ದೇಶ ಹಿಂದಿ ಕಲಿಯಲು ಇನ್ನಷ್ಟು ಆಸಕ್ತಿ ತೋರುವುದಾಗಿದೆ. ಬಹುಶಃ ಆರು ತಿಂಗಳ ಬಳಿಕ, ಹಿಂದಿಯಲ್ಲಿ ಪೂರ್ತಿ ಸಂದರ್ಶನ ನೀಡಲು ಸಫಲಳಾಗಬಹುದು,” ಎಂದು ತಿಳಿಸಿದ್ದಾರೆ.
ಎಎನ್‌ಐ ಸುದ್ದಿ ವಾಹಿನಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಎರಡು ಲಕ್ಷ ವೀಕ್ಷಣೆಗಳು ಸಿಕ್ಕಿದ್ದು, ದೇಸೀ ನೆಟ್ಟಿಗರು ಇದರಿಂದ ಭಾರೀ ಖುಷಿಯಾಗಿದ್ದಾರೆ.