ಶಂಕಿತ ಆರೋಪಿಗಳ ಹಲ್ಲುಗಳನ್ನು ಕಿತ್ತು ಕಸ್ಟಡಿ ವೇಳೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಐಪಿಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಬಲ್ವೀರ್ ಸಿಂಗ್ ಅವರನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜ್ಯ ವಿಧಾನಸಭೆಗೆ ತಿಳಿಸಿದರು.
“ನಾನು ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದೇನೆ. ಮ್ಯಾಜಿಸ್ಟ್ರೇಟ್ ವಿಚಾರಣೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ,” ಎಂದು ಸ್ಟಾಲಿನ್ ಘೋಷಿಸಿದರು.
ಸುಮಾರು ಹತ್ತು ದಿನಗಳ ಹಿಂದೆ, ತಿರುನಲ್ವೇಲಿ ಜಿಲ್ಲೆಯ ಅಂಬಾಸಮುದ್ರಂನಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನಿಯೋಜನೆಗೊಂಡಿದ್ದ 2020 ರ ಬ್ಯಾಚ್ ಐಪಿಎಸ್ ಅಧಿಕಾರಿ, ಕಟಿಂಗ್ ಪ್ಲೈಯರ್‌ನಿಂದ ಐವರು ಪುರುಷರ ಹಲ್ಲುಗಳನ್ನು ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರಿಯು ಕಸ್ಟಡಿ ವೇಳೆ ಚಿತ್ರಹಿಂಸೆ ನೀಡಿದರೆಂದು ಆರೋಪಿಸಿದ್ದರು.
ಬಲ್ವೀರ್ ಸಿಂಗ್ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಆದಾಗ್ಯೂ ಇದು ಸಾಕಾಗುವುದಿಲ್ಲ ಎಂದಿರುವ ಮಾನವ ಹಕ್ಕುಗಳ ರಕ್ಷಕರು ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು ಎಂದಿದ್ದಾರೆ.