ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಏಪ್ರಿಲ್ 1 ರಿಂದ ಅಗತ್ಯ ಔಷಧಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಸಾಮಾನ್ಯ ಬಳಕೆ ಔಷಧಿಗಳ ಬೆಲೆಯನ್ನು ಶೇಕಡ 12.12ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ. ಇದು ಇದುವರೆಗಿನ ಅತ್ಯಧಿಕ ಎಂದು ಹೇಳಲಾಗಿದೆ. ಹೃದ್ರೋಗ ಔಷಧ, ನೋವು ನಿವಾರಕ, ಆಂಟಿ ಬಯೋಟೆಕ್, ಗಂಟಲಿಗೆ ಸಂಬಂಧಿಸಿದ ಔಷಧ, ಆಂಟಿ ಫಂಗಲ್, ಆಂಟಿ ಸೆಪ್ಟಿಕ್ ಸೇರಿದಂತೆ 800 ಔಷಧಗಳ ಬೆಲೆ ಹೆಚ್ಚಳ ಆಗಲಿದೆ.
ಕಳೆದ ವರ್ಷ ಶೇಕಡ 10.76ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ವರ್ಷ ರಾಷ್ಟ್ರೀಯ ಔಷದ ಬೆಲೆ ನಿಯಂತ್ರಣ ಪ್ರಾಧಿಕಾರ ಶೇಕಡ 12.12ರಷ್ಟು ಬೆಲೆ ಏರಿಕೆಗೆ ಅನುಮೋದನೆ ನೀಡಿದೆ. ಪ್ರಾಧಿಕಾರ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ ಎಂದು ವರ್ಗೀಕರಿಸಲಾಗುತ್ತದೆ. ನಾನ್ ಶೆಡ್ಯೂಲ್ಡ್ ಔಷಧಗಳ ಬೆಲೆಗಳು ಪ್ರಾಧಿಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳ ಬೆಲೆಯನ್ನು ವಾರ್ಷಿಕ ಶೇಕಡ 10 ರಷ್ಟು ಹೆಚ್ಚಳ ಮಾಡಲು ಅವಕಾಶ ಇರುತ್ತದೆ. ಪ್ರಸ್ತುತ ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ, ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರದ ಮೇಲೆ ಪ್ರತಿ ವರ್ಷ ಸಗಟು ಬೆಲೆ ಸೂಚ್ಯಂಕವನ್ನು ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಪರಿಷ್ಕರಿಸಿ ಅದರ ಆಧಾರದ ಮೇಲೆ ಔಷಧ ಬೆಲೆ ಏರಿಕೆ ಮಾಡಲಿದೆ.