ಬಳ್ಳಾರಿ: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ-ತೆಕ್ಕಲಕೋಟೆ ಬಳಿ ನಡೆದಿದೆ.
ಸಿರುಗುಪ್ಪದ ವಿಶ್ವಜ್ಯೋತಿ ಶಾಲೆಗೆ ಸೇರಿದ ಬಸ್ ಇದಾಗಿದ್ದು, ಬಸ್ ನಲ್ಲಿ 30 ಮಕ್ಕಳು ಇದ್ದರು. ಪರೀಕ್ಷೆ ಮುಗಿದ ಬಳಿಕ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್ ನಿಲ್ಲಿಸಿದ ಚಾಲಕ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್ ಮಕ್ಕಳು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿರಗುಪ್ಪದಿಂದ ತೆಕ್ಕಲಕೋಟೆ ಪಟ್ಟಣಕ್ಕೆ ಮಕ್ಕಳನ್ನು ಮನೆಗೆ ಬಿಡಲು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.