
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಜೇನು ನೊಣಗಳು ಏಕಾಏಕಿ ದಾಳಿ ನಡೆಸಿವೆ. ಇದರಿಂದಾಗಿ ಆಸ್ಪತ್ರೆಯಲ್ಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕುಷ್ಟಗಿಯ ಬುದ್ಧಿ ಬಸವೇಶ್ವರ ಪ್ರೌಢಶಾಲೆ, ಬಾಲಕ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ, ಕ್ರೈಸ್ತ ಕಿಂಗ್ ಶಾಲೆಗಳಲ್ಲಿ 2023 -24ನೇ ಸಾಲಿನ ಆದರ್ಶ ವಿದ್ಯಾಲಯದ ಆರನೇ ತರಗತಿ ದಾಖಲಾತಿಗೆ ಭಾನುವಾರ ಪ್ರವೇಶ ಪರೀಕ್ಷೆ ನಿಗದಿಯಾಗಿತ್ತು.
ಪರೀಕ್ಷೆ ಬರೆಯಲು ಕ್ರೈಸ್ತ ಕಿಂಗ್ ಶಾಲೆಗೆ ಮಾವಿನ ಇಟಗಿ, ಮುದೆನೂರು, ಗೋತಗಿ, ಹಿರೇಮನ್ನಾಪುರ, ತಳುವಗೆರಾ, ನಿಡಶೇಷಿ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಏಕಾಏಕಿ ಜೇನುನೊಣಗಳು ಪೋಷಕರು ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಕಚ್ಚಿವೆ.
ಶಾಲೆಯ ಆವರಣದಲ್ಲಿದ್ದ ಮರದಲ್ಲಿ ಜೇನುಗೂಡು ಕಟ್ಟಿದ್ದು, ಪರೀಕ್ಷೆ ಬರೆಯಲು ಬಂದ ವೇಳೆ ದಾಳಿ ಮಾಡಿವೆ. ಇದರಿಂದಾಗಿ ಅಶ್ವಿನಿ, ವೀರೇಶ್, ಚಂದ್ರಶೇಖರ್ ಎಂಬ ಮಕ್ಕಳಿಗೆ ಜೇನು ನೊಣ ಕಚ್ಚಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಅಲ್ಲಿಯೇ ಪರೀಕ್ಷೆ ಬರೆದಿದ್ದಾರೆ.
ಡಿಡಿಪಿಐ ಎಂ.ಎ. ರೆಡ್ಡೇರ ಮತ್ತು ಬಿಇಒ ಕಾಂಬಳೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ಹೆಜ್ಜೇನು ದಾಳಿಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಜೇನು ದಾಳಿಗೆ ಒಳಗಾದವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.