ಮಂಗಳೂರು: ಹೋಲಿ ಸಂಭ್ರಮದಲ್ಲಿ ಡಿಜೆ ಪಾರ್ಟಿ ಆಯೋಜಿಸಿ ಪರಸ್ಪರ ಬಣ್ಣ ಎರಚುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ತಡೆಯೊಡ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಬಳಿ ನಡೆದಿದೆ.
ರಂಗ್ ದೇ ಬರ್ಸಾ ಹೆಸರಿನಲ್ಲಿ ಹೋಲಿ ಡಿಜೆ ಪಾರ್ಟಿ ಆಯೋಜಿಸಲಾಗಿತ್ತು. ಯುವಕ-ಯುವತಿಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದರು. ಈ ವೇಳೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಬ್ಯಾನರ್ ಗಳನ್ನು ಹರಿದು, ಅಲ್ಲಿದ್ದ ವಸ್ತುಗಳನ್ನು ಬಿಸಾಡಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಡಿಜೆ ಪಾರ್ಟಿಯಲ್ಲಿ ಅನ್ಯಕೋಮಿನ ಯುವಕರ ಜೊತೆ ಹೋಲಿ ಆಚರಿಸಲಾಗಿದೆ. ಅಲ್ಲದೇ ಅಶ್ಲೀಲ ವರ್ತನೆ ತೋರಿದ್ದಾಗಿ ಭಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಡಿ.ಜೆ.ಪಾರ್ಟಿ ಆಯೋಜಕರು ಹಾಗೂ ಭಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.