ಅಮೆರಿಕದ ಟಸ್ಕಾಲೂಸಾ ಎಂಬ ಊರಿನ ಆಲ್ಬರ್ಟಾ ಎಂಬ ವಸತಿ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಕುದುರೆ ಮರಿಯನ್ನು ಹಿಡಿಯಲು ಅದೆಷ್ಟು ಹರಸಾಹಸ ಪಡಬೇಕಾಯಿತು ಎಂದು ಪೊಲೀಸ್ ಅಧಿಕಾರಿಗಳು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಆ ಪ್ರದೇಶದ ನಿವಾಸಿಗಳಿಂದ ಕರೆ ಬಂದ ಕೂಡಲೇ ಕುದುರೆ ಮರಿಯನ್ನು ಹಿಡಿಯಲು ಬಂದ ಪೊಲೀಸರಿಗೆ ಭಾರೀ ಕೆಲಸ ಕೊಟ್ಟಿದೆ ಕುದುರೆ ಮರಿ. ಪೀಟ್ಝಾ ಕ್ರಸ್ಟ್‌ಗಳು ಮತ್ತು ಪೆಪ್ಪರ್ ಮಿಂಟ್‌ಗಳನ್ನು ತೋರಿಸಿ ಕರೆದರೂ ಸಹ ತಮ್ಮತ್ತ ಬಾರದೇ ಓಡೋಡಿ ಹೋಗುತ್ತಿದ್ದ ಕುದುರೆ ಮರಿಯನ್ನು ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಸಾಕುಸಾಕಾಗಿ ಹೋಗಿದೆ.
ಸ್ವಲ್ಪ ಹೊತ್ತು ಚೆನ್ನಾಗಿ ಜೂಟಾಟ ಆಡಿದ ಬಳಿಕ ಕುದುರೆ ಮರಿ ತಾನೇ ತಾನಾಗಿ ಪೊಲೀಸರತ್ತ ತೆರಳಿದ್ದು, ಅಧಿಕಾರಿಗಳೊಂದಿಗೆ ಸೆಲ್ಫೀಗಳಿಗೆ ಸಖತ್ತಾಗಿ ಪೋಸ್ ಕೊಟ್ಟಿದೆ. ಈ ಕುದುರೆ ಮರಿಗೆ ’ಗಿನುವೈನ್’ ಎಂಬ ತಾತ್ಕಾಲಿಕ ಹೆಸರಿಡಲಾಗಿದೆ.
“ಮೂರು ಅಧಿಕಾರಿಗಳು ಕಾಲ್ನಡಿಗೆಯಲ್ಲೇ ಗಿನುವೈನ್‌ನನ್ನು ಹಿಡಿಯುವ ಕಾಯಕಲ್ಲಿ ನಿರತರಾಗಿದ್ದರು. ರಸ್ತೆಗಳು ಹಾಗೂ ಮನೆಯ ಹಿತ್ತಲುಗಳಲ್ಲೆಲ್ಲಾ ಅಡ್ಡಾಡಿದ ಕುದುರೆ ಮರಿ ಪೊಲೀಸ್ ಸಿಬ್ಬಂದಿಗೆ ಎರಡು ಗಂಟೆಗಳ ಕಾಲ ಕೆಲಸ ಕೊಟ್ಟಿದೆ. ಬಳಿಕ ತಾನೇ ತಾನಾಗಿ ಪೊಲೀಸರತ್ತ ಬಂದ ಕುದುರೆ ಮರಿ ತಲೆ ಸವರಿಸಿಕೊಂಡು ಭಾರೀ ಖುಷಿಯಲ್ಲಿ ಸೆಲ್ಫಿಗಳಿಗೆ ಪೋಸ್ ಕೊಟ್ಟಿದೆ,” ಎಂದು ಪೊಲೀಸ್ ಇಲಾಖೆ ತನ್ನ ಫೇಸ್ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು, ಕುದುರೆ ಮರಿಯ ಚಿನ್ನಾಟದ ಕಥೆಯನ್ನು ಚೆನ್ನಾಗಿ ಎಂಜಾಯ್ ಮಾಡಿದ್ದಾರೆ.