ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಅಲ್ಲಿನ ಬಾಹುಬಲಿ ಬೆಟ್ಟ. ವಿರಾಗಿಯಾಗಿ ನಿಂತ ಇಲ್ಲಿನ ಬಾಹುಬಲಿ ಜೈನರ ಆರಾಧ್ಯ ದೈವವಾದರೂ ಅಲ್ಲಿ ರಾಗ, ದ್ವೇಷಗಳನ್ನು ಮೆಟ್ಟಿ ನಿಂತ ಮಹಾನ್ ವ್ಯಕ್ತಿಯಾಗಿ ಗೋಚರಿಸುತ್ತಾನೆ.
ಬಾಹುಬಲಿಯ ಪ್ರತಿಮೆ ರತ್ನಗಿರಿ ಬೆಟ್ಟದ ಮೇಲೆ ಇದ್ದು, ಧರ್ಮಸ್ಥಳದ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಪ್ರತಿಮೆಯು 39 ಅಡಿ ಎತ್ತರವಿದ್ದು 1973 ರಲ್ಲಿ ರೆಂಜನ ಗೋಪಾಲ ಕೃಷ್ಣ ಶೆನೊಯಿ ಎಂಬುವವರಿಂದ ಕೆತ್ತಲ್ಪಟ್ಟಿದೆ. ಫೆಬ್ರವರಿ 1982ರಲ್ಲಿ, ಈ ಪ್ರತಿಮೆಯನ್ನು ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳಕ್ಕೆ ತಂದರು. ಈ ಪ್ರತಿಮೆಯು ತ್ಯಾಗ ಮತ್ತು ನಿಸ್ವಾರ್ಥತೆಯ ಸಂಕೇತವಾಗಿದೆ.
ಜನಪ್ರಿಯ ಜಾನಪದದ ಪ್ರಕಾರ, ಬಾಹುಬಲಿ ಮತ್ತು ಭರತ (ಹಿರಿಯ ಸಹೋದರ), ಅಧಿಕಾರಕ್ಕಾಗಿ ಹೋರಾಡಿ ಗೆದ್ದ ಬಾಹುಬಲಿ ಸರ್ವಸ್ವವನ್ನೂ ಅಣ್ಣನಿಗೆ ಬಿಟ್ಟು ಕೊಟ್ಟು ತಾನು ವಿರಾಗಿಯಾಗಿ ಬೆತ್ತಲೆಯಾಗಿ ಹೊರಟ ಎನ್ನಲಾಗುತ್ತದೆ.
20 ನಿಮಿಷ ರತ್ನಗಿರಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿ ಯನ್ನು ಕಣ್ತುಂಬಿಕೊಳ್ಳಬಹುದು. ಬೆಟ್ಟದ ಮೇಲೆ ಪ್ರವಾಸಿಗರಿಗೆ ಆಶ್ರಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರವಾಸಿಗರಿಗೆ ಬೆಳಗ್ಗೆ 8 ರಿಂದ 10 ಹಾಗು ಸಂಜೆ 6 ರಿಂದ 7 ಸೂಕ್ತ ಸಮಯವಾಗಿದೆ.