ಬೆಂಗಳೂರು: ಮಾರ್ಚ್ 27 ರಂದು 81,000 ಕುರುಬರಹಟ್ಟಿ, ಗೊಲ್ಲರಹಟ್ಟಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ.
ವಿವಿಧ ಜಿಲ್ಲೆಗಳ ಸರ್ಕಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಕುರುಬರಹಟ್ಟಿ, ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಅಲ್ಲಿರುವ 81,000 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು.
ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಇತ್ತೀಚೆಗೆ ಕಲಬುರ್ಗಿಯಲ್ಲಿ ಲಂಬಾಣಿ ತಾಂಡಗಳಲ್ಲಿ ವಾಸಿಸುವ 52 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ ದಾಖಲೆ ಆಗಿದ್ದು, ಈಗ 23 ಜಿಲ್ಲೆಗಳಲ್ಲಿ ಕುರುಬರಹಟ್ಟಿ, ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕುಟುಂಬಗಳಿಗೆ ಮಾರ್ಚ್ 27ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳು ಹಕ್ಕುಪತ್ರ ನೀಡಲಿದ್ದಾರೆ ಎಂದರು.
ಅಂದು ಮುಖ್ಯಮಂತ್ರಿಗಳು ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹಕ್ಕು ಪತ್ರ ವಿತರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 12,000, ಬೆಳಗಾವಿ ಜಿಲ್ಲೆಯಲ್ಲಿ 11000, ತುಮಕೂರು ಜಿಲ್ಲೆಯಲ್ಲಿ 10,000, ವಿಜಯನಗರ ಜಿಲ್ಲೆಯಲ್ಲಿ 5000 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುತ್ತದೆ. ಇದುವರೆಗೆ 1,672 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಆದೇಶ ಹೊರಡಿಸಲಾಗಿದೆ ಎಂದರು.