ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ ವೇಳೆಯಲ್ಲಿ? ಚಿರತೆಗಳು ಸಾಮಾನ್ಯವಾಗಿ ತಮ್ಮ ಆಹಾರಕ್ಕಾಗಿ ಹಸುಗಳನ್ನು ಬೇಟೆಯಾಡುತ್ತವೆ. ಹಾಗಾಗಿ ಚಿರತೆ ಹಾಗೂ ಹಸುಗಳ ನಡುವೆ ಸ್ನೇಹ ಸಂಬಂಧ ತೀರಾ ಅಸಹಜವಾದದ್ದೆಂದೇ ಹೇಳಬಹುದು.
ಆದರೆ ಭಾರತದ ಗ್ರಾಮೀಣ ಪ್ರದೇಶವೊಂದರಲ್ಲಿ ಸೆರೆ ಹಿಡಿಯಲಾದ ಚಿರತೆ ಹಾಗೂ ಹಸುವಿನ ಅಪ್ಪುಗೆಯ ಚಿತ್ರವೊಂದು ಊಹಿಸಲಸಾಧ್ಯವಾದ್ದೊಂದನ್ನು ವಾಸ್ತವದಲ್ಲೇ ಸಾಧ್ಯವಾಗಿಸಿದೆ. ಈ ಚಿತ್ರ ಸುದ್ದಿ ಮಾಡಿ ಎರಡು ದಶಕಗಳೇ ಕಳೆದಿವೆ. ಈ ಚಿತ್ರಕ್ಕೆ ನೀಡಲಾದ ಕ್ಯಾಪ್ಷನ್ ಪ್ರಕಾರ, ಹಸುವು ಆ ಚಿರತೆಯನ್ನು ಮರಿಯಾಗಿದ್ದಾಗಿನಿಂದಲೂ ಹಾಲುಣಿಸಿ ಸಲಹಿದೆ. ಈ ಚಿತ್ರದ ಮೇಲೆ ಥರಾವರಿ ಕಥೆಗಳು ವರ್ಷಗಳಿಂದ ಹುಟ್ಟಿಕೊಂಡಿದ್ದರೂ ಸಹ ಕೆಲವೊಮ್ಮೆ ಪ್ರಕೃತಿಯಲ್ಲಿ ಏನೆಲ್ಲಾ ಪವಾಡಗಳು ನಡೆಯುತ್ತವೆ ಎಂದು ಈ ಚಿತ್ರ ನಮಗೆ ಸಾರುತ್ತದೆ.
ಈ ಚಿತ್ರವು 21 ವರ್ಷ ಹಳೆಯದಾಗಿದ್ದರೂ ಸಹ ಕೆಲವೊಮ್ಮೆ ಡಿಜಿಟಲ್ ಪೋರ್ಟಲ್‌ಗಳು ತಮಗೆ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಹಾಗೂ ವೀಕ್ಷಣೆಗಳು ಬೇಕೆಂದು ಇದೇ ಚಿತ್ರವನ್ನು ಹೊಸದೆಂಬಂತೆ ಪ್ರಕಟಿಸುತ್ತಲೇ ಬಂದಿವೆ.
ಗುಜರಾತ್‌ನ ವಡೋದರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೆರೆ ಹಿಡಿಯಲಾದ ಈ ಚಿತ್ರದಲ್ಲಿ ಒಂದು ವರ್ಷದ ಚಿರತೆ ಹಾಗೂ ಮೂರು ವರ್ಷದ ಹಸು ಇರುವುದಾಗಿ ಈ ಚಿತ್ರಗಳನ್ನು ಮೊದಲ ಬಾರಿಗೆ ಪ್ರಕಟಿಸಿದ ಟೈಮ್ಸ್ ಆಫ್ ಇಂಡಿಯಾದ ಜಾಲತಾಣ ಹೇಳುತ್ತಿದೆ. ಈ ಚಿರತೆಯು ಪದೇ ಪದೇ ಹಸುವನ್ನ ಭೇಟಿ ಮಾಡಲು ಬರುತ್ತಿದ್ದದ್ದನ್ನು ಹಳ್ಳಿಗರು ಕಂಡಿದ್ದಾಗಿಯೂ, ಚಿರತೆಯು ಹಸುವಿನೊಂದಿಗೆ ಒಂದಷ್ಟು ಹೊತ್ತು ಆಟವಾಡಿಕೊಂಡು ಮರಳಿ ಕಾಡಿಗೆ ಹೋಗುತ್ತಿದ್ದದ್ದಾಗಿಯೂ ಗ್ರಾಮಸ್ಥರು ತಿಳಿಸಿದ್ದರು.
ಚಿರತೆಗೆ ಹಸುವಿನೊಂದಿಗೆ ಸಮಯ ಕಳೆಯಲು ಇಷ್ಟವಾದರೂ ಸಹ ಗ್ರಾಮಸ್ಥರು ಇದನ್ನೇ ನೋಡಲು ನೆರೆಯುತ್ತಿದ್ದ ಕಾರಣ ಅದಕ್ಕೆ ಕಿರಿಕಿರಯಾದಂತೆ ಆಗಿ ಪದೇ ಪದೇ ಹಾಗೆ ಬರುವುದನ್ನು ಬಿಟ್ಟುಬಿಟ್ಟಿತ್ತಂತೆ!