ಯುಗಾದಿ ಎಂದ ಕೂಡಲೇ ತಳಿರು ತೋರಣ, ಸುಣ್ಣ –ಬಣ್ಣ ಕಂಡ ಗೋಡೆಗಳು, ಮನೆಮಂದಿಯ ಸಂಭ್ರಮ ಹೀಗೆ ಹಲವು ಚಿತ್ತಾರಗಳು ಕಣ್ಮುಂದೆ ಸುಳಿಯುತ್ತವೆ. ಇದರೊಂದಿಗೆ ಯುಗಾದಿ ವಿಶೇಷ ಎಣ್ಣೆಸ್ನಾನ(ಅಭ್ಯಂಜನ) ಕೂಡ ಒಂದಾಗಿದೆ.
ಹಬ್ಬದ ವೇಳೆ ಎಣ್ಣೆಸ್ನಾನ ಮಾಡುವುದು ರೂಢಿಯಲ್ಲಿದೆ. ನಿತ್ಯದ ಸ್ನಾನಕ್ಕಿಂತ ಎಣ್ಣೆ ಸ್ನಾನ ವಿಶೇಷವಾದುದು. ಮೈಕೈಗೆಲ್ಲಾ ಎಣ್ಣೆ ಹಚ್ಚಿಕೊಂಡು ತಿದ್ದಿ ತೀಡಿದರೆ, ದೇಹ ನಿರಾಳವಾಗುತ್ತದೆ. ಕೆಲ ಸಮಯದ ಬಳಿಕ ಬಿಸಿನೀರಿನಲ್ಲಿ ಸ್ನಾನಮಾಡುವುದರಿಂದ ದೇಹ, ಮನಸಿಗೆ ಆಹ್ಲಾದವೆನಿಸುತ್ತದೆ.
ಹಬ್ಬದ ಪ್ರತಿ ಆಚರಣೆಗೂ ಮಹತ್ವವಿದೆ. ಅದೇ ರೀತಿ ಎಣ್ಣೆ ಸ್ನಾನಕ್ಕೆ ವೈಜ್ಞಾನಿಕ ಕಾರಣಗಳಿವೆ. ಅಭ್ಯಂಜನದಿಂದ ಚೈತನ್ಯ ಬರುತ್ತದೆ. ದೇಹ, ಕೂದಲು, ಕೈಕಾಲುಗಳಿಗೆ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತ್ವಚೆಯೂ ಉತ್ತಮವಾಗಿರುತ್ತದೆ.
ಹಾಗಾಗಿ ಈ ಹಬ್ಬದ ವೇಳೆಯಲ್ಲಿ ಎಣ್ಣೆಸ್ನಾನ ಮಾಡಿ ಹೊಸಬಟ್ಟೆ ಧರಿಸುತ್ತಾರೆ. ಎಣ್ಣೆ ಹಚ್ಚಿದ ದೇಹದ ತ್ವಚೆ ಮೃದುವಾಗುತ್ತದೆ. ಹಬ್ಬದ ವೇಳೆ ಮಾತ್ರವಲ್ಲ, ಆಗಾಗ ಎಣ್ಣೆ ಸ್ನಾನ ಮಾಡುವುದು ಒಳ್ಳೆಯದೆಂದು ಬಲ್ಲವರ ಅಭಿಪ್ರಾಯವಾಗಿದೆ.