
ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ ಮಾರ್ಚ್ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಈ ಸಂಬಂಧ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿ ಸಂಘಗಳ ರಚನೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಯುವಕರಿಗಾಗಿ ಮೊದಲ ಬಾರಿಗೆ ಸ್ವಉದ್ಯೋಗ ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಜಂಟಿ ಬಾಧ್ಯತಾ ಗುಂಪುಗಳ ರಚನೆಯಾಗಿ ಸುತ್ತು ನಿಧಿ ಹಂಚಿಕೆ, ಯೋಜನೆ ಗುರುತಿಸಿ ಬ್ಯಾಂಕಿನಿಂದ ಸಾಲ ಪಡೆದು ಉದ್ದಿಮೆ ಸ್ಥಾಪಿಸಿ ಉತ್ಪಾದನೆ ಪ್ರಾರಂಭಿಸುವವರೆಗೂ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದ್ದಾರೆ.
5951 ಗ್ರಾಪಂಗಳಿದ್ದು ಯುವಶಕ್ತಿ ಯೋಜನೆ ಅಡಿ ಪ್ರತಿ ಪಂಚಾಯಿತಿಗೆ ಎರಡು ಜಂಟಿ ಬಾಧ್ಯತಾ ಗುಂಪು ರಚಿಸಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಮಾರ್ಚ್ 18ರವರೆಗೆ 6509 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿದ್ದು, ಉಳಿದ 5393 ಗುಂಪುಗಳು ರಚನೆಯಾಗಬೇಕಿದೆ. ಈಗಾಗಲೇ 1954 ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000 ಸುತ್ತು ನಿಧಿ ಪಾವತಿಸಲಾಗಿದೆ. ಬ್ಯಾಂಕುಗಳಿಗೆ 100 ಮಾದರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, 551 ಯೋಜನೆಗಳಿಗೆ ಬ್ಯಾಂಕುಗಳ ಅನುಮೋದನೆ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗಿದೆ.