ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾಮಾಜಿಕ ಸುಧಾರಕನಾದರೆ ಏನು ಮಾಡುವೆ ಎಂದು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ತನ್ನ ವಯಸ್ಸಿಗೂ ಮೀರಿದ ಅಗಾಧವಾದ ಪ್ರಬುದ್ಧತೆ ಹಾಗೂ ಸಾಮಾಜಿಕ ಕಳಕಳಿ ತೋರುವ ಉತ್ತರ ಕೊಟ್ಟಿದ್ದಾನೆ.
ಬಾಲಕನ ಈ ಉತ್ತರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಉತ್ತರ ಕಂಡು ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
“ಸ್ವಾತಂತ್ರ‍್ಯ ಪೂರ್ವ ಕಾಲದ ಸಾಮಾಜಿಕ ಸುಧಾರಕರು ನೀವಾದಲ್ಲಿ, ಅಂದಿನ ದಿನಗಳಲ್ಲಿದ್ದ ಯಾವ ಪಿಡುಗನ್ನು ತೊಡೆದು ಹಾಕುವ ಮೂಲಕ ನೀವು ಭಾರತವನ್ನು ಹಿಂದುಳಿಯುವುದರಿಂದ ತಪ್ಪಿಸುತ್ತಿದ್ದಿರಿ? ಏಕೆಂದು ವಿವರಿಸಿ?” ಎಂದು ಕೇಳಲಾದ ಪ್ರಶ್ನೆಗೆ:
“ನನಗೆ ವಿಧವೆಯರ ಮರುವಿವಾಹ ಕಾನೂನನ್ನು ಆರಂಭಿಸಲು ಇಷ್ಟವಾಗಿರುತ್ತಿತ್ತು. ಒಬ್ಬ ಮಹಿಳೆ ವಿಧವೆಯಾದರೆ ಆಕೆ ಬಿಳಿ ಸೀರೆಯುಡಬೇಕು ಇಲ್ಲ ಸತಿ ಪದ್ಧತಿ ಅನುಸರಿಸಬೇಕು, ಕೂದಲು ಕಟ್ಟಿಕೊಳ್ಳದೇ ಹೊರಗೆ ಬರಬೇಕು. ಈ ವಿಧವೆಯರು ಮರುಮದುವೆಯಾದಲ್ಲಿ, ಅವರಿಗೆ ಇನ್ನಷ್ಟು ಉತ್ತಮವಾದ ಜೀವನ ಸಿಗುತ್ತದೆ.” ಎಂದು ಬಾಲಕ ಉತ್ತರಿಸಿದ್ದಾನೆ.
ಆತನ ಶಿಕ್ಷಕರಿಗೂ ಇದು ಅತ್ಯುತ್ತಮ ಉತ್ತರವಾಗಿದೆ ಎನಿಸಿದೆ.
“ಐದನೇ ತರಗತಿಯಲ್ಲಿ ಕೇಳಲಾದ ಪ್ರಶ್ನೆಗೆ ನನ್ನ ಮಗ ಹೀಗೆ ಉತ್ತರಿಸಿದ್ದಾನೆ,” ಎಂದು ಮಹೇಶ್ವರ್ ಪೇರಿ ತಮ್ಮ ಪೋಸ್ಟ್‌ಗೆ ಕ್ಯಾಪ್ಷನ್ ಕೊಟ್ಟು ಶೇರ್ ಮಾಡಿದ್ದಾರೆ.