ಅಪಾರ್ಟ್ಮೆಂಟ್ನಲ್ಲಿ ಕಾರುಗಳನ್ನು ಶುಚಿ ಮಾಡುವ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನನ್ನು ಕೆಲಸದಿಂದ ಏಕಾಏಕಿ ತೆಗೆದು ಹಾಕಿದರು ಎಂಬ ಕಾರಣಕ್ಕೆ 15 ಕಾರುಗಳ ಮೇಲೆ ಆಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ರಾಮರಾಜ್ ಎಂಬ 25 ವರ್ಷದ ಯುವಕ ನೋಯ್ಡಾದ ಸೆಕ್ಟರ್ 75ರಲ್ಲಿರುವ ಮ್ಯಾಕ್ಸ್ ಬ್ಲಿಸ್ ವೈಟ್ ಹೌಸ್ ಸೊಸೈಟಿಯಲ್ಲಿ 2016 ರಿಂದಲೂ ಕಾರು ಶುಚಿಗೊಳಿಸುವ ಕಾರ್ಯವನ್ನು ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಕೆಲವರಿಗೆ ಆತನ ಕೆಲಸದಲ್ಲಿ ತೃಪ್ತಿ ಕಾಣದ ಕಾರಣ ಇತ್ತೀಚೆಗೆ ಆತನನ್ನು ಬಿಡಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡಿದ್ದ ರಾಮರಾಜ್ ಸೇಡು ತೀರಿಸಿಕೊಳ್ಳುವ ಸಲುವಾಗಿ ಬುಧವಾರ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಆಸಿಡ್ ತಂದು ಪಾರ್ಕಿಂಗ್ ಏರಿಯಾದಲ್ಲಿದ್ದ 15 ಕಾರುಗಳ ಮೇಲೆ ಹಾಕಿದ್ದಾನೆ. ಘಟನೆಯ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.