ತನ್ನೊಂದಿಗೆ ಕನ್ನಡದಲ್ಲಿ ಮಾತನಾಡಿದರೆಂಬ ಕಾರಣಕ್ಕೆ ಬೆಂಗಳೂರು ಮೂಲದ ಬಾಲಿವುಡ್ ನಟನೊಬ್ಬ, ಕನ್ನಡಿಗ ಅಧಿಕಾರಿಯನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ದುಬೈಗೆ ತೆರಳುವ ಸಲುವಾಗಿ ಬಾಲಿವುಡ್ ನಟ ಹಾಗೂ ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ಆಗಮಿಸಿದ್ದರು.
ಸಲ್ಮಾನ್ ಯೂಸುಫ್ ಬೆಂಗಳೂರಿನವರೇ ಆಗಿರುವ ಕಾರಣ ಸಹಜವಾಗಿ ಅಲ್ಲಿನ ಅಧಿಕಾರಿ ಕನ್ನಡದಲ್ಲಿ ಮಾತನಾಡಿಸಿದ್ದಾರೆ. ಆಗ ಆತ ನನಗೆ ಕನ್ನಡ ಬರುವುದಿಲ್ಲ ಎಂದಿದ್ದಾರೆ. ಇದಕ್ಕೆ ಆ ಅಧಿಕಾರಿ ಇದು ನನಗೆ ಅನುಮಾನ ತರುತ್ತಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಅಷ್ಟಕ್ಕೆ ಕೋಪಗೊಂಡ ನಟ ನನ್ನನ್ನು ನೀವು ಅನುಮಾನಿಸುತ್ತಿದ್ದೀರಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದ್ದಲ್ಲದೆ ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಶಾಲೆ ಕಲಿತಿದ್ದು ಸೌದಿ ಅರೇಬಿಯಾದಲ್ಲಿ. ಹಾಗಾಗಿ ಕನ್ನಡ ಬರುವುದಿಲ್ಲ ಎಂದಿದ್ದಾರೆ.
ಬಳಿಕ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದರಲ್ಲಿ, ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಬೇಕೆಂದು ಇಲ್ಲ. ನಮ್ಮ ಮಾತೃಭಾಷೆ ಹಿಂದಿ. ಅದು ನನಗೆ ಬರುತ್ತದೆ ಅಷ್ಟು ಸಾಕಲ್ಲವೇ ಎಂದು ಕೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಕನ್ನಡಿಗರು ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.