ಭಾರತದ ಸೆಮಿ ಹೈ ಸ್ಪೀಡ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ‘ವಂದೇ ಭಾರತ್ ಎಕ್ಸ್ ಪ್ರೆಸ್’ ಈಗಾಗಲೇ ಹಲವು ಭಾಗಗಳಲ್ಲಿ ಸಂಚರಿಸುತ್ತಿವೆ. ಇದೀಗ ಇದಕ್ಕೆ ನಾರಿ ಶಕ್ತಿಯೂ ದೊರಕಿದ್ದು ಸೋಲಾಪುರ ಮುಂಬೈ ನಡುವೆ ಸಂಚರಿಸುವ ‘ವಂದೇ ಭಾರತ್ ಎಕ್ಸ್ ಪ್ರೆಸ್’ ಅನ್ನು ಮಹಿಳೆಯೊಬ್ಬರು ಚಾಲನೆ ಮಾಡಿದ್ದಾರೆ. ರೈಲು ಚಾಲಕಿ ಸುರೇಖಾ ಯಾದವ್ ಈ ಸಾಧನೆ ಮಾಡಿದವರಾಗಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಸೋಮವಾರದಂದು ಸೋಲಾಪುರದಿಂದ ಈ ರೈಲನ್ನು ಚಾಲನೆ ಮಾಡಿಕೊಂಡು ಬಂದ ಸುರೇಖಾ ಯಾದವ್, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಗೆ ಯಶಸ್ವಿಯಾಗಿ ಬಂದು ತಲುಪಿದ್ದಾರೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಅವರನ್ನು ಸ್ವಾಗತಿಸಿದ್ದಾರೆ.
ಮೂಲತಃ ಮಹಾರಾಷ್ಟ್ರದ ಸತಾರದವರಾದ ಸುರೇಖಾ ಯಾದವ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೊ ಮಾಡಿದ್ದಾರೆ. 1988 ರಲ್ಲಿ ರೈಲ್ವೆ ಇಲಾಖೆ ಸೇರಿದ್ದು, ಭಾರತದ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈವರೆಗೆ ಇತರೆ ರೈಲುಗಳನ್ನು ಚಾಲನೆ ಮಾಡುತ್ತಿದ್ದ ಅವರು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ನಿಯೋಜನೆಗೊಳ್ಳುವ ಮುನ್ನ 2023ರ ಫೆಬ್ರವರಿಯಿಂದ ಗುಜರಾತಿನ ವಡೋದರದಲ್ಲಿ ತರಬೇತಿ ಪಡೆದಿದ್ದರು.