ಬೆಳಗಾವಿ: ಸಾರ್ವಜನಿಕವಾಗಿ ಇರುವವರು ಸೀತೆಯಷ್ಟೇ ಪವಿತ್ರವಾಗಿರಬೇಕಾಗುತ್ತದೆ. ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪವಿತ್ರ ಇರಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಂಸದ ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಿಷ್ಟಾಚಾರ ಮರೆತು ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ವಿಚಾರವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಿಷ್ಟಾಚಾರ ಇಲ್ಲದೇ ಮುಂದುವರೆದಿದ್ದು ಪಕ್ಷಕ್ಕೆ ಹಿನ್ನಡೆಯಾಗಲಿದೆ. ಈ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತಂದಿದ್ದೇನೆ. ರಮೇಶ್ ಜಾರಕಿಹೊಳಿ ಯೋಜನೆ, ಯೋಚನೆ ಏನಿದೆಯೋ ಗೊತ್ತಿಲ್ಲ ಎಂದು ಗುಡುಗಿದ್ದಾರೆ.
ಪಕ್ಷದ ಹಿತದೃಷ್ಟಿಯಿಂದ ನಾನು ಈ ಸತ್ಯವನ್ನು ಹೇಳುತ್ತಿದ್ದೇನೆ. ಸರಿಯಾಗಿ ಅರ್ಥಮಾಡಿಕೊಂಡು ಒಟ್ಟಾಗಿ ಹೋದರೆ ಒಳ್ಳೆಯದಾಗುತ್ತದೆ. ಸಿಎಂ ಗಮನಕ್ಕೂ ಈ ವಿಚಾರ ತಂದಿದ್ದೇನೆ. ಸರಿ ಮಾಡ್ತೀನಿ ಎಂದಿದ್ದಾರೆ. ಪಾಪ ಅವರಿಗೆ ಏನು ಒತ್ತಡ ಇದೆಯೋ ಗೊತ್ತಿಲ್ಲ ಎಂದರು.
ಒಟ್ಟಾರೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಬೆಳಗಾವಿ ಬಿಜೆಪಿ ವಲಯದಲ್ಲಿ ಆಂತರಿಕ ಅಸಮಾಧಾನ ಭುಗಿಲೇಳುತ್ತಿದ್ದು, ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.