ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಮಹಿಳೆ, ಪೊಲೀಸರು ಮತ್ತು ಇಬ್ಬರು ಪ್ರಯಾಣಿಕರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾರೆ.
ಪೊಲೀಸರ ಪ್ರಕಾರ ಸೋಮವಾರ ಹೆಡ್ ಕಾನ್‌ಸ್ಟೇಬಲ್ ಮುನೀಮ್ ಅವರು ನವದೆಹಲಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 15-16 ರಲ್ಲಿ ಗಸ್ತು ತಿರುಗುತ್ತಿದ್ದರು.
ಸಂಜೆ 6.50 ರ ಸುಮಾರಿಗೆ ಮಾಯಾಪುರಿ ನಿವಾಸಿಯಾದ ಮುಖೇಶ್ ಅವರ ಗರ್ಭಿಣಿ ಪತ್ನಿ ಕವಿತಾ ಕುಮಾರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸಹಾಯ ಕೇಳಿದರು.
ಮುನೀಮ್ ಕೂಡಲೇ ಸ್ಥಳಕ್ಕೆ ಆಗಮಿಸಿ ಸಹಾಯಕ್ಕಾಗಿ ಇಬ್ಬರು ಮಹಿಳಾ ಪ್ರಯಾಣಿಕರನ್ನು ವಿನಂತಿಸಿದರು. ಬಳಿಕ ಆಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯ ಸಹಾಯ ಕೋರಲಾಯಿತು.
ಉತ್ತರ ರೈಲ್ವೆ ಆಸ್ಪತ್ರೆಯಿಂದ ವೈದ್ಯರು ಆಗಮಿಸುವ ಮೊದಲೇ ಮಹಿಳೆ, ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಹಿಳೆ ಮತ್ತು ನವಜಾತ ಶಿಶುವನ್ನು ರೈಲ್ವೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ತಾಯಿ ಮತ್ತು ಮಗು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿದ್ದಾರೆ ಎಂದು ಡಿಸಿಪಿ ಹೇಳಿದರು.