ಚಾಮರಾಜನಗರ: ಅಂತರ್ಜಾತಿ ಮದುವೆಯಾಗಿ 5 ವರ್ಷದ ಬಳಿಕ ದಂಪತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯ ಯಜಮಾನರು ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಮಾರ್ಚ್ 1ರಂದು ಕೊಳ್ಳೇಗಾಲ ಡಿವೈಎಸ್ಪಿ ಕಚೇರಿಗೆ ದೂರು ನೀಡಲಾಗಿದೆ. ತಮಗೆ ರಕ್ಷಣೆ ನೀಡಬೇಕು ಎಂದು ಇಬ್ಬರು ಮಕ್ಕಳನ್ನು ಹೊಂದಿರುವ ಗೋವಿಂದರಾಜು ಮತ್ತು ಶ್ವೇತಾ ದಂಪತಿ ಮನವಿ ಮಾಡಿದ್ದಾರೆ.
ಉಪ್ಪಾರ ಶೆಟ್ಟಿ ಸಮುದಾಯದ ಕುಣಗಳ್ಳಿಯ ಗೋವಿಂದರಾಜು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಯ ಶ್ವೇತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2018ರ ಸೆಪ್ಟಂಬರ್ 19 ರಂದು ಇವರ ಕುಟುಂಬದವರ ಸಮ್ಮುಖದಲ್ಲಿ ಮಳವಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿಯಾಗಿದೆ.
ಮಳವಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಕುಣಗಳ್ಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಬಳಿಕ ಅಲ್ಲಿನ ನಿವಾಸಿಗಳಿಗೆ ಅಂತರ್ಜಾತಿ ಮದುವೆಯಾಗಿರುವುದು ಗೊತ್ತಾಗಿದೆ. ಪರಿಶಿಷ್ಟ ಜಾತಿ ಯುವತಿಯನ್ನು ಮದುವೆಯಾಗಿರುವುದು ಸಮಾಜದ ಯಜಮಾನರ ಗಮನಕ್ಕೆ ಬಂದಿದೆ. ನ್ಯಾಯ ಪಂಚಾಯಿತಿ ಮಾಡಿ ಗೋವಿಂದರಾಜು ತಂದೆ ವೆಂಕಟಶೆಟ್ಟಿ ತಾಯಿ ಸಂಗಮ್ಮ ಹಾಗೂ ಗೋವಿಂದರಾಜು ದಂಪತಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿ ಮಾರ್ಚ್ 1 ರೊಳಗೆ ದಂಡ ಕಟ್ಟುವಂತೆ ಹೇಳಿದ್ದಾರೆ.
ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರಿಂದ ದಂಡದ ಮೊತ್ತವನ್ನು 6 ಲಕ್ಷ ರೂಪಾಯಿಗೆ ಹೆಚ್ಚಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಜನರೊಂದಿಗೆ ಮಾತನಾಡುವಂತಿಲ್ಲ. ಅಂಗಡಿಗಳಲ್ಲಿ ಹಾಲು, ತರಕಾರಿ, ದಿನಸಿ, ತರುವಂತಿಲ್ಲ. ನೀರನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಯಳಂದೂರು ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.