ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಕೊಲೆಗಳಾದವು ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಪ್ರಗತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಸರ್ಕಾರವಿದ್ದಾಗ ಐ ಎ ಎಸ್ ಅಧಿಕಾರಿ ಡಿ.ಕೆ.ರವಿ, ಡಿವೈ ಎಸ್ ಪಿ ಗಣಪತಿ ಸಾವು ಆಯ್ತು. ಭ್ರಷ್ಟಾಚಾರ, ರೀಡೂ, ಹಾಸಿಗೆ ತಲೆದಿಂಬಿನಲ್ಲಿಯೂ ಹಗರಣಗಳನ್ನು ಮಾಡಿದ್ದು ಕಾಂಗ್ರೆಸ್. ಇದೆಲ್ಲವನ್ನು ಬಿಜೆಪಿ ಪ್ರಗತಿಯಾತ್ರೆಯಲ್ಲಿ ಜನರ ಮುಂದಿಡಲಾಗುವುದು ಎಂದರು.
ಕಾಂಗ್ರೆಸ್ ಅವಧಿಯಲ್ಲಿನ ವೈಫಲ್ಯಗಳನ್ನು ಜನರ ಮುಂದೆ ಇಡುತ್ತೇವೆ. ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ಹೇಳುತ್ತೇವೆ. ಹಳ್ಳಿಹಳ್ಳಿಗೆ ಪ್ರಗತಿಯಾತ್ರೆ ಮೂಲಕ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ತಿಳಿಸುತ್ತೇವೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರಾಜ್ಯದ ಪ್ರತಿ ಮನೆ ಮನೆಗೂ ಸರ್ಕಾರದ ಯೋಜನೆ ಸಾಧನೆಗಳನ್ನು ತಲುಪಿಸಲಿದ್ದಾರೆ ಎಂದು ಹೇಳಿದರು.