ಬೆಂಗಳೂರು: ಕಾಂಗ್ರೆಸ್ ವಿರುದ್ಧ ಅರ್ಕಾವತಿ ರೀಡೂ ಅಂತಾ 8ಸಾವಿರ ಕೋಟಿ ವಂಚನೆ ಆರೋಪ ಈಗ ಮಾಡಿದ್ದಾರೆ. ಕಳೆದ 4 ವರ್ಷಗಳಿಂದ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸದನದಲ್ಲಿ ಎಲ್ಲಾ ಡಿನೋಟಿಫೈ, ರೀಡೂ ಬಗ್ಗೆ ಚರ್ಚೆಯಾಗಲಿ ನಾವು ಚರ್ಚೆಗೆ ಸಿದ್ಧರಿದ್ದೇವೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸ್ವತಃ ಗೃಹ ಸಚಿವ ಅರಗ ಜ್ಞಾನೇಂದ್ರ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಿದೆ. ಆದರೆ ಈ ಮಾತನ್ನು ಹೇಳುವ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂಬ ನಮ್ಮ ಆರೋಪಕ್ಕೆ ಅವರು ಅಂಕಿತ ಹಾಕಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಜಗಳ, ಯುದ್ಧ ನಡೆಯುತ್ತಿರುವುದು ಕಾಂಗ್ರೆಸ್ ನಲ್ಲಿ ಅಲ್ಲ. ನಾನು ಸಿದ್ದರಾಮಯ್ಯ ಕೈಕೈ ಮಿಲಾಯಿಸಿ ಜಗಳವಾಡಲು ಕುಸ್ತಿ ಅಖಾಡದಲ್ಲಿ ಇಲ್ಲ. ಜಗಳ, ಕುಸ್ತಿಗಳು ಏನಿದ್ದರೂ ಬಿಜೆಪಿಯಲ್ಲಿದೆ. ಯುದ್ಧ, ಹೇಳಿಕೆ ಸಮರ ನಡೆಯುತ್ತಿರುವುದು ಬಿಜೆಪಿ ಪಕ್ಷದಲ್ಲಿ. ಅವರು ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿದ್ದು ಯಾಕೆ? ನಿರಾಣಿ ವಿಚಾರವಾಗಿ ಯತ್ನಾಳ್ ಏನು ಹೇಳಿದರು? ಸರ್ಕಾರದ ಬಗ್ಗೆ ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಏನು ಹೇಳಿದ್ದಾರೆ? ವಿಧಾನಸೌಧ ಕಾರಿಡಾರ್ ನಲ್ಲಿ ಬಿಜೆಪಿ ಶಾಸಕರು ಏನು ಮಾತನಾಡುತ್ತಿದ್ದಾರೆ? ಯೋಗೇಶ್ವರ್ ಏನು ಹೇಳಿದ್ದಾರೆ? ಮಂಚದ ಮೇಲಿದ್ದ ಮಂತ್ರಿ ಯಾರು ಭ್ರಷ್ಟ ಎಂದು ಹೇಳಿದ? ಎಂಟಿಬಿ ನಾಗರಾಜ್ ಅವರು ಏನು ಹೇಳಿದರು? ಮಾಧ್ಯಮಗಳಲ್ಲಿ ಯಾರ ಸರ್ಕಾರದ ರೇಟ್ ಕಾರ್ಡ್ ಪ್ರಕಟವಾಯಿತು? ಇದು ಸುಳ್ಳಾಗಿದ್ದರೆ ಅದನ್ನು ಸಾಬೀತು ಮಾಡಿ ಅವರ ವಿರುದ್ಧ ಕೇಸ್ ಯಾಕೆ ಹಾಕಿಲ್ಲ? ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇದ್ದರೆ ಅಧಿವೇಶನ ವಿಸ್ತರಣೆ ಮಾಡಲಿ ನಾವು ಚರ್ಚೆಗೆ ಬರುತ್ತೇವೆ ಎಂದು ಹೇಳಿದರು.